ಸಾರಾಂಶ
‘ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ದೂರವಾಣಿ ಮೂಲಕ ನಾನು ಹೇಳಿದ್ದೆಲ್ಲವೂ ಸತ್ಯ - ಬಿ.ಆರ್.ಪಾಟೀಲ್
ಕಲಬುರಗಿ : ‘ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಕುರಿತು ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ದೂರವಾಣಿ ಮೂಲಕ ನಾನು ಹೇಳಿದ್ದೆಲ್ಲವೂ ಸತ್ಯ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆಗಳ ಹಂಚಿಕೆ ವಿಚಾರವಾಗಿ ಒಂದು ಮನವಿಗಾಗಿ ನಾನು ಅವರಿಗೆ ಕರೆ ಮಾಡಿದ್ದೆ. ಆಡಿಯೋದಲ್ಲಿರುವ ಧ್ವನಿ ನನ್ನದೆ, ನನ್ನ ಆರೋಪಕ್ಕೆ ನಾನು ಈಗಲೂ ಬದ್ಧ. ಆದರೆ, ಈ ಆಡಿಯೋ ಲೀಕ್ ಆಗಿದ್ದು ಹೇಗೆ ಎಂಬುದು ಗೊತ್ತಿಲ್ಲ‘ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ‘ನನ್ನ ಫೋನ್‌ನಿಂದಲೇ ಸರ್ಫರಾಜ್ ಜೊತೆಗೆ ಮಾತನಾಡಿದ್ದೇನೆ. ಈ ಹಿಂದೆ ಹಲವು ಬಾರಿ ಹೇಳಿದರೂ ಮನೆಗಳು ಮಂಜೂರು ಆಗಿರಲಿಲ್ಲ, ಅದಕ್ಕೆ ಫೋನ್ ಮಾಡಿ ಮಾತಾಡಿದ್ದೆ. ನನ್ನ ಆಡಿಯೋ ವಿಚಾರ ಯಾಕೆ ಇಷ್ಟು ಸಿರಿಯಸ್ ಆಗುತ್ತಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ನಾನು ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಆಗುವವನಲ್ಲ’ ಎಂದರು.
ಯಾರೋಬ್ಬ ವ್ಯಕ್ತಿಯ ಹೆಸರನ್ನೂ ತೆಗೆದುಕೊಂಡು ನಾನು ಮಾತನಾಡಿಲ್ಲ. ನಾನು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ದೇನೆ. ನಾನು ನಿಗಮಕ್ಕೆ ನಾಲ್ಕು ಪತ್ರಗಳನ್ನು ನೀಡಿದ್ದೆ. ಆದರೆ, ಯಾವುದೇ ಮನೆಗಳು ಮಂಜೂರು ಆಗಲಿಲ್ಲ. ಇದೇ ವಿಚಾರಕ್ಕಾಗಿ ನಾನು ಸರ್ಫರಾಜ್ ಅವರಿಗೆ ಫೋನ್ ಮಾಡಿ ಮಾತಾಡಿದ್ದೇನೆ, ಗ್ರಾಮಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಆಗಬೇಕು, ಅದೂ ಆಗಿಲ್ಲ. ಈ ಬಗ್ಗೆ ತನಿಖೆ ಮಾಡುವುದಾದರೆ ಮಾಡಲಿ ಎಂದು ಆಗ್ರಹಿಸಿದರು.
ನನ್ನ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆ:
ನನ್ನ ಕ್ಷೇತ್ರದಲ್ಲೇ ನನಗೆ ಗೊತ್ತಿಲ್ಲದೆ ಕೆಲವು ಸರ್ಕಾರಿ ಕಾಮಗಾರಿಗಳು ನಡೆಯುತ್ತಿವೆ. ನನ್ನ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ನಿಧಿಗೆ ₹17 ಕೋಟಿ ಬಂದಿದೆ. ಕಾಮಗಾರಿಯೂ ಶುರುವಾಗಿದೆ. ಆದರೆ, ಗುದ್ದಲಿ ಪೂಜೆಗೂ ನನ್ನನ್ನು ಕರೆದಿಲ್ಲ. ಇದನ್ನು ನೋಡಿದರೆ ಇಲ್ಲಿ ಸ್ಪಷ್ಟವಾಗಿ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬುದು ಗೊತ್ತಾಗುತ್ತದೆ. ಒಬ್ಬ ಶಾಸಕನಾದ ನನಗೇ ನನ್ನ ಕ್ಷೇತ್ರಕ್ಕೆ ಹಣ ಬಂದಿರುವುದು, ಕೆಲಸ ಶುರುವಾಗಿರುವುದು ಗೊತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೆಕೆಆರ್‌ಡಿಬಿಯಿಂದ ಮೌಲಾನಾ ಅಬ್ದುಲ್ ಕಲಾಂ ಆಝಾದ್ ವಸತಿ ಶಾಲೆ ಕಟ್ಟುತ್ತಿದ್ದೇವೆ. ಈಗ ಈ ಶಾಲೆಗಾಗಿ ಅಲ್ಪಸಂಖ್ಯಾತರ ಇಲಾಖೆಯಿಂದ ಮತ್ತೆ ₹17 ಕೋಟಿ ಬಂದಿದೆ. ಇಲಾಖೆಯಿಂದ ಈ ರೀತಿ ಹಣ ಕೊಡುವುದಾದರೆ ನಾನು ಏಕೆ ಕೆಕೆಆರ್‌ಡಿಬಿಯಿಂದ ತೆಗೆದುಕೊಳ್ಳುತ್ತಿದ್ದೆ? ಇದೇ ಮಂಡಳಿಯ ಹಣವನ್ನು ನಾನು ಬೇರೆ ಕೆಲಸಕ್ಕಾದರೂ ಬಳಸಿಕೊಳ್ಳುತ್ತಿದ್ದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.