ಕೈ ನಾಯಕರಿಂದ ವಕ್ಫ್‌ ಆಸ್ತಿ ವಶಪಡಿಸಿಕೊಳ್ಳಲಿ ಎಂದಿದ್ದೆ: ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ

| Published : Nov 04 2024, 12:48 AM IST / Updated: Nov 04 2024, 12:46 PM IST

ಕೈ ನಾಯಕರಿಂದ ವಕ್ಫ್‌ ಆಸ್ತಿ ವಶಪಡಿಸಿಕೊಳ್ಳಲಿ ಎಂದಿದ್ದೆ: ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಫ್‌ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ಆಸ್ತಿ ವಶಪಡಿಸಿಕೊಳ್ಳುವಂತೆ ವಕ್ಫ್‌ ಬೋರ್ಡ್‌ಗೆ ಹೇಳಿದ್ದೇನೆಯೇ ವಿನಃ ರೈತರ ಆಸ್ತಿಯನ್ನಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

 ಹುಬ್ಬಳ್ಳಿ : ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಫ್‌ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ಆಸ್ತಿ ವಶಪಡಿಸಿಕೊಳ್ಳುವಂತೆ ವಕ್ಫ್‌ ಬೋರ್ಡ್‌ಗೆ ಹೇಳಿದ್ದೇನೆಯೇ ವಿನಃ ರೈತರ ಆಸ್ತಿಯನ್ನಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಜಮೀರ್ ಅವರು ನನ್ನ ಹಳೆಯ ವಿಡಿಯೋ ಬಿಡುಗಡೆ ಮಾಡಿ, ನಾನು ರೈತರ ಜಮೀನು ವಶಪಡಿಸಿಕೊಳ್ಳಲು ವಕ್ಫ್‌ಗೆ ಸೂಚನೆ ನೀಡಿದ್ದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ‌. ನಾನು ವಕ್ಫ್‌ ಬೋರ್ಡ್‌ನೊಂದಿಗೆ ಯಾವುದೇ ಸಭೆ ಮಾಡಿಲ್ಲ. ಯಾವ ಕಾಂಗ್ರೆಸ್‌ನ ದೊಡ್ಡ, ದೊಡ್ಡ ನಾಯಕರು ಮೋಸದಿಂದ ಎಷ್ಟೆಷ್ಟು ವಕ್ಫ್‌ ಆಸ್ತಿ ಕಬಳಿಸಿದ್ದಾರೆ ಎಂಬುದು ಅನ್ವರ್ ಮಾನಿಪ್ಪಾಡಿ ವರದಿಯಲ್ಲಿ ಸ್ಪಷ್ಟವಾಗಿದೆ‌ ಎಂದರು.

ಬಿಜೆಪಿ ಅವಧಿಯಲ್ಲಿಯೇ ರೈತರಿಗೆ ನೋಟಿಸ್‌ ನೀಡಲಾಗಿತ್ತು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ರೈತರಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ರೈತರ ಜಮೀನು ವಶಪಡಿಸಿಕೊಂಡಿಲ್ಲ. ಸಚಿವ ಜಮೀರ್ ಅವರು ಈಗ ರೈತರಿಗೆ ನೋಟಿಸ್ ಕೊಡುವುದಕ್ಕೂ ಮೊದಲು ಕಾಂಗ್ರೆಸ್ ನಾಯಕರು ಎಲ್ಲಿ ವಕ್ಫ್‌ ಆಸ್ತಿ ಕಬಳಿಸಿದ್ದಾರೆಯೋ ಅದನ್ನು ವಾಪಸ್ ಪಡೆಯಲಿ ಎಂದು ತಿರುಗೇಟು ನೀಡಿದರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಆದೇಶ ನೀಡಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಈಗ ನೋಟಿಸ್‌ ವಾಪಸ್ ಪಡೆದು ಚುನಾವಣೆಯ ಬಳಿಕ ಮತ್ತೆ ನೋಟಿಸ್‌ ನೀಡುವುದಿಲ್ಲ ಅನ್ನುವುದಕ್ಕೆ ಏನು ಗ್ಯಾರಂಟಿ?. ಅದರ ಬದಲು ವಕ್ಫ್‌ನಲ್ಲಿ ಏನು ಗೆಜೆಟ್ ನೋಟಿಫಿಕೇಶನ್ ಆಗಿದೆಯೋ ಅದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ, ರೈತರ ಆಸ್ತಿ ಉಳಿಸಬೇಕೆಂದಿದ್ದರೆ, ಮುಖ್ಯಮಂತ್ರಿಯವರು ಕೂಡಲೆ ವಕ್ಪ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು. ಯಾವುದೇ ರೈತರಿಗೆ ನೋಟಿಸ್ ಕೊಡಬಾರದು ಎಂದರು.