ಬಾಹ್ಯಾಕಾಶದಲ್ಲಿ 5 ಇಂಚು ಉದ್ದ ಆಗಿದ್ದೆ: ಶುಕ್ಲಾ!

| Published : Nov 21 2025, 01:45 AM IST

ಸಾರಾಂಶ

ಬಾಹ್ಯಾಕಾಶದಲ್ಲಿ 5 ಇಂಚು ಉದ್ದ ಆಗಿದ್ದೆ ಎಂದು ಶುಕ್ಲಾ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾಹ್ಯಾಕಾಶಕ್ಕೆ ಗಗನಯಾನಿಗಳನ್ನು ಕಳುಹಿಸುವ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ, ಸಂಕೀರ್ಣವಾದ ‘ಗಗನಯಾನ ಯೋಜನೆ’ಯಲ್ಲಿ ಯಾನಿಗಳು ಕೂರುವ ‘ಕ್ರ್ಯೂ ಕ್ಯಾಪ್ಸುಲ್’ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಗಗನಯಾನಿ ಶುಭಾಂಶು ಶುಕ್ಲಾ ತಿಳಿಸಿದ್ದಾರೆ.

ಗುರುವಾರ ಟೆಕ್ ಸಮ್ಮಿಟ್‌ನಲ್ಲಿ ‘ಫ್ಯುಚರ್ ಮೇಕರ್ಸ್’ ಸಂವಾದದಲ್ಲಿ ಭಾರತದ ಬಾಹ್ಯಾಕಾಶ ಯೋಜನೆ ಕುರಿತ ಸವಾಲಿನ ಮತ್ತು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡ ಅವರು, ನಾನು 16-17 ವರ್ಷಗಳಿಂದ ಪೈಲಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಎಂದಿಗೂ ಟಚ್‌ಸ್ಕ್ರೀನ್ ಬಳಸಿ ಏರ್‌ಕ್ರಾಫ್‌, ಸ್ಪೇಸ್‌ಕ್ರಾಫ್ಟ್‌ ಹಾರಾಟ ನಡೆಸಿಲ್ಲ. ಆದರೆ, ಅಮೆರಿಕದ ಸ್ಪೇಸ್‌ಎಕ್ಸ್‌ನ ಬಾಹ್ಯಾಕಾಶ ಯೋಜನೆಯ ಕ್ರ್ಯೂ ಡ್ರ್ಯಾಗನ್‌ ಅನ್ನು ಕೇವಲ ಟಚ್‌ ಸ್ಕ್ರೀನ್‌ನಲ್ಲಿ ನಿಯಂತ್ರಿಸಬಹುದು. ಕೈಯಿಂದ ನಿಯಂತ್ರಣ ಮಾಡುವ ಯಾವುದೇ ಸಾಧನ ಅದರಲ್ಲಿಲ್ಲ ಎಂದು ತಿಳಿಸಿದರು.

ಕ್ರ್ಯೂ ಕ್ಯಾಪ್ಸುಲ್‌ನಲ್ಲಿ ಸೀಟ್ ಕೂರಿಸುವುದು ಹೇಗೆ? ಭಾರೀ ಒತ್ತಡದಲ್ಲಿ ಕೆಲಸ ನಿರ್ವಹಿಸುವಂತೆ ಕಂಟ್ರೋಲ್ ಸಾಧನಗಳ ಅಳವಡಿಕೆ, ಬಾಹ್ಯಾಕಾಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದರೆ 18-20 ಜಿ ಫೋರ್ಸ್‌ ಮೈ ಮೇಲೆ ಬೀಳುತ್ತದೆ. ಅಂದರೆ ಒಂದು ಮರಿಯಾನೆ ಎದೆ ಮೇಲೆ ಕುಳಿತಂತೆ. ಅಂತಹ ಸಮಸ್ಯೆಗಳನ್ನು ಪರಿಹರಿಸುವ ಕುರಿತು ತಂತ್ರಜ್ಞಾನದ ಶೋಧನೆ ನಮ್ಮ ದೇಶದಲ್ಲಿ ನಡೆದಿದೆ. ಏಕೆಂದರೆ, ಬಾಹ್ಯಾಕಾಶಕ್ಕೆ ತೆರಳುವಾಗ ಕೇವಲ ಎಂಟೂವರೆ ನಿಮಿಷದಲ್ಲಿ ಸೊನ್ನೆ ಕಿ.ಮೀ.ನಿಂದ 28,500 ಕಿ.ಮೀ. ವೇಗವನ್ನು ತಲುಪುತ್ತೇವೆ ಎಂದು ಶುಭಾಂಶು ತಿಳಿಸಿದರು.

ನಾಲ್ಕೂವರೆ ವರ್ಷಗಳಿಂದ ತರಬೇತಿ:

ನಾಲ್ಕೂವರೆ ವರ್ಷಗಳಿಂದ ನನಗೆ ತರಬೇತಿ ನೀಡಲಾಗುತ್ತಿದೆ. ಆದರೂ, ರಾಕೆಟ್‌ನ ಎಂಜಿನ್ ಚಾಲನೆಗೊಳ್ಳುತ್ತಿದ್ದಂತೆ ನಮಗೆ ಗೊತ್ತಿದ್ದ ಎಲ್ಲವೂ ಮರೆತು ಹೋಗುತ್ತದೆ. ಏಕೆಂದರೆ, ರಾಕೆಟ್‌ನ ವೇಗ ಆ ಮಟ್ಟಿಗೆ ಇರುತ್ತದೆ. ಬಾಹ್ಯಾಕಾಶಕ್ಕೆ ಹೋಗುವ ರಾಕೆಟ್‌ನ ಕ್ಯಾಪ್ಸುಲ್‌ನಲ್ಲಿ ಕುಳಿತಾಗ ಹೃದಯ, ಶ್ವಾಸಕೋಶ ಮೇಲೆ ಭಾರೀ ಒತ್ತಡ ಸೃಷ್ಟಿಯಾಗುತ್ತದೆ. ತರಬೇತಿ ಅವಧಿಯಲ್ಲಿ ನನಗೆ 8ಜಿ ಫೋರ್ಸ್ ಅನುಭವ ಮಾಡಿಸಲಾಗಿತ್ತು. ಅಂದರೆ, ಎದೆ ಮೇಲೆ ಒಂದು ಬೈಕ್ ಇಟ್ಟಷ್ಟು ಭಾರ ಸೃಷ್ಟಿಯಾಗುತ್ತದೆ. ಪ್ರಜ್ಞೆ ತಪ್ಪುತ್ತದೆ ಎಂದು ಶುಭಾಂಶು ಅನುಭವ ಹಂಚಿಕೊಂಡರು.

ಮಗುವಿನಂತಾಗುತ್ತೀರಿ:

ಬಾಹ್ಯಾಕಾಶಕ್ಕೆ ಹೋದ ನಂತರ ನೀವು ಪುಟ್ಟ ಮಗುವಿನಂತಾಗುವಿರಿ, ಅಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ತಿನ್ನುವುದು, ಮಲಗುವುದು, ನಡೆಯುವುದು, ಬಾತ್‌ರೂಮ್‌ಗೆ ಹೋಗುವುದು ಸೇರಿ ಎಲ್ಲವನ್ನು ಮಗುವಿನಂತೆ ಕಲಿಯಬೇಕು. 1961ರಲ್ಲಿ ಮೊದಲ ಬಾರಿ ಮಾನವನನ್ನು ಕರೆದೊಯ್ದ ಬಾಹ್ಯಾಕಾಶ ಕ್ಯಾಪ್ಸುಲ್ ಮತ್ತು 2025ರಲ್ಲಿನ ನನ್ನನ್ನು ಕರೆದೊಯ್ದ ಸ್ಪೇಸೆಕ್ಸ್‌ನ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ಗಮನಿಸಿದಾಗ ತಂತ್ರಜ್ಞಾನದಲ್ಲಿ ಅಗಾಧ ಬದಲಾವಣೆ ಸ್ಪಷ್ಟವಾಗಿ ಕಾಣುತ್ತದೆ ಎಂದು ಶುಭಾಂಶು ತಿಳಿಸಿದರು.

ಇತ್ತೀಚೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ ನನಗೆ ನಾಲ್ಕೈದು ದಿನ ಹಸಿವು ಆಗಿರಲಿಲ್ಲ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವ ಕಾರಣ ಹಸಿವು ಎನಿಸುವುದಿಲ್ಲ. ನನ್ನ ಎತ್ತರವೂ 5 ಇಂಚು ಹೆಚ್ಚಾಗಿತ್ತು. ಆದರೆ,‌ 20 ದಿನಗಳ ಯಾನ ಮುಗಿಸಿ ಭೂಮಿಗೆ ಬಂದಾಗ 5 ಕೆ.ಜಿ. ತೂಕ ಕಡಿಮೆ‌ ಆಗಿತ್ತು. ಏರಿಕೆಯಾಗಿದ್ದ ಎತ್ತರವೂ ಭೂಮಿ ಮೇಲೆ ಕಡಿಮೆಯಾಯಿತು ಎಂದರು.