ಸಾರಾಂಶ
ನಾನು ಕೂಡಾ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಚುನಾವಣೆಯಲ್ಲಿ ಸೋತಿದ್ದೇನೆ ಅದಕ್ಕಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸುವ ಮಹದಾಸೆ ಇತ್ತು. ಆದರೆ ಅದು ಸಾಧ್ಯವಿಲ್ಲ ಎನ್ನುವುದು ಗೊತ್ತಾಯಿತು, ಅದಕ್ಕಾಗಿ ಸುಮ್ಮನಾದೆ ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಬಿ. ಶ್ರೀರಾಮುಲು ಹೇಳಿದರು.
ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷರಾಯ್ಕೆ ಘೋಷಣೆ ವಿಳಂಬ
ಗದಗ: ನಾನು ಕೂಡಾ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಚುನಾವಣೆಯಲ್ಲಿ ಸೋತಿದ್ದೇನೆ ಅದಕ್ಕಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸುವ ಮಹದಾಸೆ ಇತ್ತು. ಆದರೆ ಅದು ಸಾಧ್ಯವಿಲ್ಲ ಎನ್ನುವುದು ಗೊತ್ತಾಯಿತು, ಅದಕ್ಕಾಗಿ ಸುಮ್ಮನಾದೆ ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಬಿ. ಶ್ರೀರಾಮುಲು ಹೇಳಿದರು. ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ವೇಳೆಗೆ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಘೋಷಣೆಯಾಗುವ ಸಾಧ್ಯತೆ ಇತ್ತು. ಆದರೆ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಅಲ್ಪ ವಿಳಂಬವಾಗಿದೆ. ಶೀಘ್ರದಲ್ಲಿಯೇ ಅದು ಘೋಷಣೆಯಾಗಲಿದೆ ಎಂದರು. ಕಲೆಕ್ಷನ್ ಸರ್ಕಾರ: ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರ್ಕಾರವಲ್ಲ, ಇದೊಂದು ಕಲೆಕ್ಷನ್ ಸರ್ಕಾರ. ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿರುವ ಇವರು ಆಡಳಿತದಲ್ಲಿ ಸಂಪೂರ್ಣ ಹಿಡಿತ ಕಳೆದುಕೊಂಡಿದೆ. ರಾಜ್ಯದ ಹಿತ ಇವರಿಗೆ ಬೇಕಾಗಿಲ್ಲ. ಕರ್ನಾಟಕದಲ್ಲಿ ಹಣ ಸಂಗ್ರಹಿಸಿ ಪಕ್ಕದ ತೆಲಂಗಾಣಕ್ಕೆ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಹಾಗಾಗಿ ಇದೊಂದು ಕಲೆಕ್ಷನ್ ಸರ್ಕಾರ ಎಂದು ನಾನು ಒತ್ತಿ ಹೇಳುತ್ತೇನೆ ಎಂದರು.ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎನ್ನುವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು ನಮ್ಮ ಪಾರ್ಟಿ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡಿ, ರಾಜ್ಯದ ಜನತೆ ನಿಮಗೆ ಅಧಿಕಾರ ಕೊಟ್ಟಿದ್ದಾರೆ ಮೊದಲು ಅವರ ಸಮಸ್ಯೆಗಳಿಗೆ ಸ್ಪಂದಿಸಿ, ರೈತರು ವಿದ್ಯುತ್ ಸಮಸ್ಯೆಯಿಂದ ನಿತ್ಯವೂ ಕಣ್ಣೀರು ಹಾಕುತ್ತಿದ್ದಾರೆ. ರೈತರು ಅವರ ಮಕ್ಕಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟುತ್ತದೆ ಎಂದರು. ಬರಗಾಲಕ್ಕಾಗಿ ನೀವು ಏನು ಮಾಡಿದ್ದೀರಿ ಎನ್ನುವುದನ್ನು ರಾಜ್ಯದ ಜನತೆಗೆ ತಿಳಿಸಿ, ಬರಗಾಲಕ್ಕಾಗಿ ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳುವುದೇ ಕೆಲ ಸಚಿವರ ಉದ್ಯೋಗವಾಗಿದೆ. ಬರಗಾಲ ಪರಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿ, ಅನಗತ್ಯವಾಗಿ ಕೇಂದ್ರದತ್ತ ಕೇಂದ್ರವನ್ನು ಟೀಕಿಸುತ್ತಿದ್ದಾರೆ ಎಂದರು. ಇನ್ನು ಮುಖ್ಯಮಂತ್ರಿ ಬದಲಾವಣೆ, ಎರಡುವರೇ ವರ್ಷದ ಅಧಿಕಾರದ ಹಂಚಿಕೆಯ ಬಗ್ಗೆ ಚರ್ಚೆಯಾಗುತ್ತಿವೆ, ಅದು ಅವರ ಪಕ್ಷದ ಆಂತರಿಕ ವಿಷಯವಾಗಿದೆ. ಅದರ ಬಗ್ಗೆ ನಾನು ಮಾತನಾಡಲ್ಲ, ಆದರೆ ಸಣ್ಣ ಖರ್ಗೆ ಅವರ ವರ್ತನೆ ಮತ್ತು ಹೇಳಿಕೆಗಳನ್ನು ಗಮನಿಸಿದಾಗ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.ಸುಳ್ಳುಗಾರ ಸಿದ್ದು: ಬರಗಾಲದಂಥ ಈ ಸಂದರ್ಭದಲ್ಲಿ ಸಿಎಂ ಡ್ಯಾನ್ಸ್ ಮಾಡಿದ್ದಾರೆ. ಇದನ್ನೇ ಬೇರೆ ಪಕ್ಷದವರು ಮಾಡಿದ್ದರೆ ಸಿದ್ದರಾಮಯ್ಯ ಹೇಗೆ ವರ್ತಿಸುತ್ತಿದ್ದರು? ಹೋದಲ್ಲಿ ಬಂದಲ್ಲಿ ಅಣಕಿಸಿ ತೋರಿಸುತ್ತಿದ್ದರು. ತಾವು ಮಾಡಿದರೆ ಸರಿ, ಉಳಿದವರು ಮಾಡಿದರೆ ತಪ್ಪು ಎನ್ನುವ ಮನಸ್ಥಿತಿ ಸರಿಯಲ್ಲ ಎಂದು ಕುಟುಕಿದ ಶ್ರೀರಾಮುಲು.ಸಿದ್ದರಾಮಯ್ಯ ಒಬ್ಬ ಮಹಾನ್ ಸುಳ್ಳುಗಾರ. ಪ್ರಧಾನಿ ಮೋದಿ ನಮಗೆ ಭೇಟಿಗೆ ಅವಕಾಶವನ್ನೇ ಕೊಡುತ್ತಿಲ್ಲ ಎಂದು ಪದೇ ಪದೇ ಹೇಳುತ್ತೀರಲ್ಲ, ನೀವು ಅವರ ಭೇಟಿಗೆ ಸಮಯ ಕೇಳಿದ ಯಾವುದಾರರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಿ, ಸುಮ್ಮನ್ನೇ ರಾಜ್ಯದ ಜನರನ್ನು ದಾರಿ ತಪ್ಪಿಸುವುದು ಆ ಮೂಲಕ ನಿಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಶ್ರೀರಾಮುಲು ತಾಕೀತು ಮಾಡಿದರು.