ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಅವ್ಯವಹಾರ ಮತ್ತು 10 ರು. ಭ್ರಷ್ಟಾಚಾರ ನಡೆಸಿರುವುದನ್ನು ಮಾಜಿ ಕಾರ್ಯದರ್ಶಿ ದೊಡ್ಡಯ್ಯ ಮತ್ತು ಬೆಂಬಲಿಗರು ಸಾಬೀತುಪಡಿಸಿದರೆ ಕನಕ ಭವನದ ಎದುರು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಕುರುಬರ ಸಂಘದಲ್ಲಿ ಅವ್ಯವಹಾರ ಮತ್ತು 10 ರು. ಭ್ರಷ್ಟಾಚಾರ ನಡೆಸಿರುವುದನ್ನು ಮಾಜಿ ಕಾರ್ಯದರ್ಶಿ ದೊಡ್ಡಯ್ಯ ಮತ್ತು ಬೆಂಬಲಿಗರು ಸಾಬೀತುಪಡಿಸಿದರೆ ಕನಕ ಭವನದ ಎದುರು ನೇಣು ಹಾಕಿಕೊಳ್ಳುತ್ತೇನೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಯ್ಯ ಮತ್ತು ಬೆಂಬಲಿಗರು ಅಧ್ಯಕ್ಷ ಸುರೇಶ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರ ಮೇಲೆ ಕಪ್ಪುಮಸಿ ಎರಚಿ ಹಲ್ಲೆಗೆ ಪ್ರಯತ್ನಿಸಿರುವುದನ್ನು ಖಂಡಿಸಿದರು.

ಕಳೆದ ಬಾರಿ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಕುರುಬರ ಹಾಸ್ಟೆಲ್ ಕಟ್ಟಡ ಪೂರ್ಣಗೊಳ್ಳುವವರೆಗೆ ಪ್ರಸ್ತುತ ಇರುವ ಆಡಳಿತ ಮಂಡಳಿಯೇ ಮುಂದುವರಿಯಲಿ ಎಂದು ಶೇ.90ರಷ್ಟು ಸದಸ್ಯರು ಸಹಿ ಹಾಕಿ ಒಪ್ಪಿಗೆ ಕೊಟ್ಟಿದ್ದಾರೆ. ಅಲ್ಲದೇ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರೂ ಸಹ ಅನುಮತಿ ನೀಡಿದ್ದಾರೆ ಎಂದರು.

ಪ್ರಸ್ತುತ ಇರುವ ಆಡಳಿತ ಮಂಡಳಿ ಮುಂದುವರಿಯುವಂತೆ ಅನುಮತಿ ನೀಡಿರುವ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಅವರನ್ನು ಪ್ರಶ್ನಿಸಲಿ. ಇಲ್ಲವೇ ಕಾನೂನಾತ್ಮಕವಾಗಿ ಹೋರಾಟ ಮಾಡಲಿ. ಇದನ್ನು ಬಿಟ್ಟು ಅಧ್ಯಕ್ಷ ಸುರೇಶ್ ಮೇಲೆ ಕಪ್ಪುಮಸಿ ಬಳಿದು ಗೂಂಡಾವರ್ತನೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷರು ಶಿಥಿಲಗೊಂಡಿದ್ದ ಕುರುಬರ ವಿದ್ಯಾರ್ಥಿ ನಿಲಯನ್ನು ತೆರವುಗೊಳಿಸಿ ಸರ್ಕಾರದಿಂದ 8 ಕೋಟಿ ರು. ವೆಚ್ಚದ ನೀಲನಕ್ಷೆ ತಯಾರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ 4 ಕೋಟಿ ರು. ಬಿಡುಗಡೆ ಮಾಡಿಸಿದ್ದಾರೆ. 1ನೇ ಅಂತಸ್ತಿನ ಕಾಮಗಾರಿ ಮುಗಿದು 2ನೇ ಅಂತಸ್ತಿನ ಕಾಮಗಾರಿ ಪ್ರಾರಂಭವಾಗಿದೆ. ಇದನ್ನು ಸಹಿಸದ ವಿರೋಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಕಳೆದ ಮಾ.26 ರಂದು ಸಂಘದ ಆವರಣದಲ್ಲಿ ಅಧ್ಯಕ್ಷ ಎಂ.ಎಲ್.ಸುರೇಶ್ ಅವರ ಮೇಲೆ ದೊಡ್ಡಯ್ಯ ಬೆಂಬಲಿಗರಾದ ಸಾತನೂರು ಮಹೇಶ್‌, ಕೋಣಸಾಲೆ ಶಿವಣ್ಣ, ಕೃಷ್ಣ ಅವರು ತಮ್ಮವರನ್ನು ಎತ್ತಿಕಟ್ಟಿ ಕಪ್ಪು ಮಸಿ ಎರಚಿ, ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಇಬ್ಬರ ಮೇಲೆ ಪ್ರಕರಣ ದಾಖಲು:

ಅಧ್ಯಕ್ಷರ ಮೇಲೆ ಕಪ್ಪು ಮಸಿ ಎರಚಿ, ಹಲ್ಲೆಗೆ ಯತ್ನಿಸಿರುವ ಮದ್ದೂರಿನ ಬೀರೇಶ್, ಪಾಂಡವಪುರ ಹಾರೋಹಳ್ಳಿಯ ರಾಜು ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ, ಈ ಘಟನೆಗೆ ಕಾರಣರಾದ ಹಾರೋಹಳ್ಳಿ ಕೃಷ್ಣ, ಸಾತನೂರು ಮಹೇಶ್, ಕೋಣಸಾಲೆ ಶಿವಣ್ಣ ಅವರನ್ನು ಸಂಘದಿಂದ ವಜಾ ಮಾಡಲಾಗಿದೆ ಎಂದರು.

ಸಂಘದಲ್ಲಿ ಅವ್ಯವಹಾರ ನಡೆದಿಲ್ಲ:

ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಬೀರಪ್ಪ ಮಾತನಾಡಿ, ಸಂಘವು ಕಳೆದ 5 ವರ್ಷಗಳಿಂದ ಅಭಿವೃದ್ಧಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಯಾವುದೇ ದುರುಪಯೋಗ, ಅವ್ಯವಹಾರವಾಗಲಿ ನಡೆದಿಲ್ಲ. 25 ವರ್ಷದಿಂದ ಸಂಘವು ನೋಂದಣಿಯಾಗಿರಲಿಲ್ಲ. ಇದನ್ನು ತಿಳಿದ ಅಧ್ಯಕ್ಷ ಸುರೇಶ್ ಅವರು 23 ಲಕ್ಷ ರು. ಖರ್ಚು ಮಾಡಿ ನೋಂದಣಿ ಮಾಡಿಸಿದ್ದಾರೆ. ಕಿಡಿಗೇಡಿಗಳು ಇದೇ ರೀತಿ ಸಂಘದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರೆ ಇಡೀ ಸಮುದಾಯದವರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಾತನೂರು ರಾಜು, ನರಸಪ್ಪ ಹೆಗಡೆ, ಮೀನಾಕ್ಷಿ, ಹುಚ್ಚಪ್ಪ, ಪಾರ್ಥ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.