ಶಶಿ ಹುಲಿಕುಂಟೆ ಮಠ್ ರವರನ್ನು ಗೆಲ್ಲಿಸಿದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಆನೆಬಲ ಬರಲಿದೆ. ಪ್ರತಿಯೊಂದು ಗ್ರಾಮದಲ್ಲಿರುವ ಪದವೀಧರ ಮತದಾರರ ಪಟ್ಟಿ ಕೈಗೆ ಸಿಗಲಿದೆ. ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪದವೀಧರ ಮತದಾರರನ್ನು ಭೇಟಿಯಾಗಿ ತಮ್ಮ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ಮಾಡಿದಲ್ಲಿ ಶಶಿ ಹುಲಿಕುಂಟೆಮಠ್ ರವರ ಗೆಲುವು ಅಸಾಧ್ಯವೇನಲ್ಲ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯವನ್ನು ತಮ್ಮ ಗೆಲುವಿಗೆ ಕಾರಣ ಮಾಡಿಕೊಳ್ಳಲು ಇದು ಸಕಾಲವಾಗಿದೆ .

ಕನ್ನಡಪ್ರಭ ವಾರ್ತೆ ತುರುವೇಕೆರೆ

ಆಗ್ನೇಯ ಪದವೀಧರ ಕ್ಷೇತ್ರದ ಮತದಾರ ಪ್ರಭುಗಳು ನನ್ನನ್ನು ಬೆಂಬಲಿಸಿ ವಿಧಾನಪರಿಷತ್ ಗೆ ಕಳಿಸಿದಲ್ಲಿ ನಾನು ಪದವೀಧರರು ಮತ್ತು ಶಿಕ್ಷಕರ ದನಿಯಾಗಿ ಕೆಲಸ ಮಾಡುವೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಮನವಿ ಮಾಡಿದರು.

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪದವೀಧರರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ಹಾಕುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ನಾನು ಹಲವಾರು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಪಕ್ಷ ನೀಡಿದ ಹತ್ತು ಹಲವಾರು ಹುದ್ದೆಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಪಕ್ಷದ ಮುಖಂಡರಿಗೆ ಗೌರವ ತಂದಿದ್ದೇನೆ. ಹತ್ತು ಹಲವಾರು ಹೋರಾಟಗಳನ್ನು ಮಾಡಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ದುಡಿದಿದ್ದೇನೆ. ಈ ಎಲ್ಲಾ ಮಾನದಂಡಗಳನ್ನು ಪರಿಗಣಿಸಿಯೇ ಕಾಂಗ್ರೆಸ್ ಪಕ್ಷ ನನ್ನನ್ನು ಈ ಆಗ್ನೇಯ ಪದವೀಧರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸಿದೆ ಎಂದರು.

ಈ ಆಗ್ನೇಯ ಪದವೀಧರ ಕ್ಷೇತ್ರ 36 ತಾಲೂಕುಗಳನ್ನು ಒಳಗೊಂಡಿದೆ. ತುಮಕೂರು ಜಿಲ್ಲೆಯಲ್ಲಿ ಸುಮಾರು 51 ಸಾವಿರದಷ್ಟು ಮತಗಳಿವೆ. ತಾಲೂಕಿನಲ್ಲಿ ಸುಮಾರು 2700 ಮತದಾರರು ಇದ್ದಾರೆ. ಎಲ್ಲರಿಗೂ ಈ ಕಾಂಗ್ರೆಸ್ ಸರ್ಕಾರದ ಜನಪರ ಹೋರಾಟಗಳು ಮತ್ತು ಯೋಜನೆಗಳ ಅರಿವಿದೆ. ಗ್ಯಾರಂಟಿ ಯೋಜನೆಯಿಂದ ಬಡತನ ನಿವಾರಣೆ ಆಗಿದೆ. ಜನರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಹಾಗಾಗಿ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಮತಯಾಚನೆ ಮಾಡಬೇಕೆಂದು ಮನವಿ ಮಾಡಿದರು.

ತಾವು ಜಯ ಗಳಿಸಿದ್ದಲ್ಲಿ ನಿರುದ್ಯೋಗಿಗಳಾಗಿರುವ ಹಲವಾರು ಯುವಕರಿಗೆ ಉದ್ಯೋಗ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ. ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಹಲವಾರು ಕೈಗಾರಿಕೆಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಈ ಕೈಗಾರಿಕೆಗಳಲ್ಲಿ ನಮ್ಮ ಜಿಲ್ಲೆಯಲ್ಲಿರುವ ಪದವೀಧರರಿಗೆ ಆದ್ಯತೆ ನೀಡಬೇಕೆಂದು ಹಕ್ಕೊತ್ತಾಯ ಮಾಡಬಹುದು. ಸರ್ಕಾರಿ ನೌಕರರ ಬಹು ವರ್ಷಗಳ ಬೇಡಿಕೆಯಾಗಿರುವ ಓಪಿಎಸ್ ಅನ್ನು ಜಾರಿ ಮಾಡಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ನ ಮಾಜಿ ಸದಸ್ಯ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಬೆಮಲ್ ಕಾಂತರಾಜ್ ಮಾತನಾಡಿ, ಇದು ಜಿಲ್ಲೆಯ ಪ್ರತಿಷ್ಠಿತ ಪ್ರಶ್ನೆಯಾಗಿದೆ. ಉಪ ಮುಖ್ಯಮಂತ್ರಿಗಳಾಗಿರುವ ಡಾ.ಜಿ.ಪರಮೇಶ್ವರ್ ರವರಿಗೆ ಇದು ಸವಾಲಾಗಿದ್ದು, ಅವರೂ ಸಹ ಎಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಿ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ನಮ್ಮ ಜಿಲ್ಲೆಯವರೇ ಅಭ್ಯರ್ಥಿಯಾಗಿದ್ದಾರೆ. ಅಲ್ಲದೇ ಬಿಜೆಪಿ ಅಭ್ಯರ್ಥಿ ಬಗ್ಗೆ ಗೊಂದಲವಿದೆ. ಬಿಜೆಪಿ ಅಭ್ಯರ್ಥಿ ಆರ್ ಎಸ್ ಎಸ್ ನ ಅಭ್ಯರ್ಥಿ ಆಗಿದ್ದಾರೆ. ಹಾಗಾಗಿ ಬಿಜೆಪಿಯ ಕಾರ್ಯಕರ್ತರಿಗೆ ಅಭ್ಯರ್ಥಿಯ ಬಗ್ಗೆ ಬೇಸರವಿದೆ. ಇನ್ನು ಜೆಡಿಎಸ್ ನವರು ಉತ್ಸಾಹದಿಂದ ಪಾಲ್ಗೊಳುತ್ತಿಲ್ಲ. ಇವೆಲ್ಲಾ ನಕಾರಾತ್ಮಕ ಅಂಶಗಳು ನಮ್ಮ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಬೆಸ್ಕಾಂ ನ ಮಾಜಿ ನಿರ್ದೇಶಕ ಬಿ.ಎಸ್. ವಸಂತಕುಮಾರ್ ಮಾತನಾಡಿ, ಶಶಿ ಹುಲಿಕುಂಟೆ ಮಠ್ ರವರನ್ನು ಗೆಲ್ಲಿಸಿದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಆನೆಬಲ ಬರಲಿದೆ. ಪ್ರತಿಯೊಂದು ಗ್ರಾಮದಲ್ಲಿರುವ ಪದವೀಧರ ಮತದಾರರ ಪಟ್ಟಿ ಕೈಗೆ ಸಿಗಲಿದೆ. ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪದವೀಧರ ಮತದಾರರನ್ನು ಭೇಟಿಯಾಗಿ ತಮ್ಮ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ಮಾಡಿದಲ್ಲಿ ಶಶಿ ಹುಲಿಕುಂಟೆಮಠ್ ರವರ ಗೆಲುವು ಅಸಾಧ್ಯವೇನಲ್ಲ. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯವನ್ನು ತಮ್ಮ ಗೆಲುವಿಗೆ ಕಾರಣ ಮಾಡಿಕೊಳ್ಳಲು ಇದು ಸಕಾಲವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಳಾಲ ನಾಗರಾಜು, ದೇವರಾಜು, ಕಾರ್ಯದರ್ಶಿಗಳಾದ ಮಹಲಿಂಗಯ್ಯ, ದಬ್ಬೇಘಟ್ಟ ವೇಣುಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.