ಸಾರಾಂಶ
-ಚಿಮ್ಮನಚೋಡ ಗ್ರಾಮದಲ್ಲಿ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಸಂಸದ ಸಾಗರ ಖಂಡ್ರೆ ಭರವಸೆ
----ಕನ್ನಡಪ್ರಭವಾರ್ತೆ ಚಿಂಚೋಳಿ: ಬೀದರ ಲೋಕಸಭೆ ಮತಕ್ಷೇತ್ರಕ್ಕೆ ಒಳಪಟ್ಟಿರುವ ಮೀಸಲು ಚಿಂಚೋಳಿಗೆ ಕಾಂಗ್ರೆಸ ಪಕ್ಷದ ಅಭ್ಯರ್ಥಿಯಾಗಿರುವ ನನಗೆ ಕಾಂಗ್ರೆಸ ಕಾರ್ಯಕರ್ತರು ಹಗಲಿರುಳು ಕಷ್ಟಪಟ್ಟು ಹೆಚ್ಚು ಮತಗಳನ್ನು ನೀಡಿ ಹೆಚ್ಚಿನ ಲೀಡ ಕೊಟ್ಟಿದ್ದೀರಿ, ಯಾರೂ ನಿರಾಶೆ ಆಗಬೇಕಾಗಿಲ್ಲ. ನನ್ನ ಸಂಸದರ ನಿಧಿಯಿಂದ ಬರುವ ಅನುದಾನದಲ್ಲಿ ನಿಮ್ಮ ಗ್ರಾಮದ ಸಮಸ್ಯೆಗೆ ನಾನು ಸ್ಪಂದಿಸಿ ಅಭಿವೃದ್ಧಿಪಡಿಸುತ್ತೇನೆ ಎಂದು ಸಂಸದ ಸಾಗರ ಖಂಡ್ರೆ ಭರವಸೆ ನೀಡಿದರು.
ತಾಲೂಕಿನ ಚಿಮ್ಮನಚೋಡ ಗ್ರಾಮದ ಯಾಸ್ಮೀನ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೀದರ ಲೋಕಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಔರಾದ, ಆಳಂದ,ಚಿಂಚೋಳಿ, ಹುಮನಾಬಾದ, ಚಿಟಗುಪ್ಪ, ಹುಲಸೂರ, ಭಾಲ್ಕಿ, ಬಸವಕಲ್ಯಾಣ ಸೇರಿದಂತೆ ಒಟ್ಟು ೮ತಾಲೂಕಗಳು ಒಳಗೊಂಡಿವೆ. ಬೀದರ ಲೋಕಸಭೆ ಮತಕ್ಷೇತ್ರಕ್ಕೆ ಸಂಸದ ನಿಧಿ ೫ಕೋಟಿ ರೂ.ಗಳಲ್ಲಿ ಪ್ರತಿಯೊಂದು ತಾಲೂಕಿಗೆ ೬೦ಲಕ್ಷರೂ ನೀಡಲಾಗುವುದು ಎಂದು ಹೇಳಿದರು.ಬೀದರ ಸಂಸದರಾದ ಬಳಿಕ ಚಿಂಚೋಳಿಗೆ ಭೇಟಿ ನೀಡಿರಲಿಲ್ಲ. ಲೋಕಸಭೆ ಅಧಿವೇಶನ, ಬಜೆಟ್ ಅಧಿವೇಶನ ಇರುವುದರಿಂದ ತಾಲೂಕಿನ ಕಾರ್ಯಕರ್ತರ ಸಮಸ್ಯಗೆ ಸ್ಪಂದಿಸಲು ಆಗಿರುವುದಿಲ್ಲ. ಸಮಸ್ಯೆಗಳಿದ್ದರೆ ನನಗೆ ವ್ಯಾಟ್ಸಪ ಮೂಲಕ ಸಂದೇಶ ಕಳಿಸಿರಿ. ಬೀದರ ಲೋಕಸಭೆ ಮತಕ್ಷೇತ್ರಕ್ಕೆ ಒಟ್ಟು ೧೫ಸಾವಿರ ಮನೆಗಳು ಪ್ರಸಕ್ತ ಸಾಲಿನಲ್ಲಿ ಬಂದಿವೆ. ಅವುಗಳನ್ನು ಬಡವರಿಗೆ ನೀಡಬೇಕಾಗಿದೆ. ಚಿಂಚೋಳಿ ಮತಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ನಿಮ್ಮ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ,ಸಚಿವ ಡಾ|ಶರಣಪ್ರಕಾಶ ಪಾಟೀಲರಿಗೆ ಕ್ಷೇತ್ರದ ಅಭಿವೃದ್ದಿಗೋಸ್ಕರ ಪತ್ರವನ್ನು ಬರೆದು ಅನುದಾನ ನೀಡಲು ಒತ್ತಾಯಿಸುತ್ತೇನೆ ಎಂದು ಸಂಸದ ಸಾಗರ ಖಂಡ್ರೆ ಭರವಸೆ ನೀಡಿದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ, ಚಿಂಚೋಳಿ ಕಾಂಗ್ರೆಸ ಕಾರ್ಯಕರ್ತರು ಶಕ್ತಿ ಮೀರಿ ಚುನಾವಣೆಯಲ್ಲಿ ಕೆಲಸವನ್ನು ಮಾಡಿದ್ದೀರಿ ಆದರೆ, ನನ್ನ ಹಣೆಬರಹ ಚೆನ್ನಾಗಿರಲಿಲ್ಲ. ಚುನಾವಣೆಯ ಖರ್ಚಿಗೋಸ್ಕರ ಕಾರ್ಯಕರ್ತರನೇಕರು ಆರ್ಥಿಕ ನೆರವು, ದೇವರ ಹುಂಡಿ, ಚಂದಾ ಹಣ ನೀಡಿ ಸಹಕಾರ ನೀಡಿದ್ದಾರೆ. ಆದರೆ, ಗೆಲ್ಲಲಿಲ್ಲ. ಜನರ ಆಶೀರ್ವಾದ ನನ್ನ ಮೇಲಿದೆ. ಚಿಂಚೋಳಿಯಲ್ಲಿ ಕಾಂಗ್ರೆಸ ಪಕ್ಷದ ಶಾಸಕರಿಲ್ಲ ಎಂಬ ಭಾವನೆ ಹೋಗಲಾಡಿಸಲು ಸಂಸದರು ಶಕ್ತಿ ತುಂಬಬೇಕಾಗಿದೆ. ಮುಂದಿನ ಚುನಾವಣೆಯವರೆಗೆ ಕಾರ್ಯಕರ್ತರೆಲ್ಲರೂ ಮಾನಸಿಕವಾಗಿ ಸದೃಢರಾಗಬೇಕಾಗಿದೆ. ಸೋಲು ಗೆಲವು ಆಗಿದ್ದರೂ ಚಿಂಚೋಳಿ ಬಿಟ್ಟುಕೊಡುವುದಿಲ್ಲ. ಮುಂದೆ ಸಾಮಾನ್ಯ ಮತಕ್ಷೇತ್ರವಾದರು ಸಹ ಪಕ್ಷದ ಸೂಕ್ತ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿಕೊಡುತ್ತೇನೆ.ಚಿಂಚೋಳಿ ಮತಕ್ಷೇತ್ರಕ್ಕೆ ಹೆಚ್ಚು ಅನುದಾನ ಲಭ್ಯವಾಗುತ್ತಿಲ್ಲ ಹೆಚ್ಚುವರಿ ಅನುದಾನಕ್ಕಾಗಿ ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಡಾ|ಶರಣಪ್ರಕಾಶ ಪಾಟೀಲ ಮುಂದೆ ಬೇಡಿಕೆ ಇಟ್ಟಿದ್ದೇವೆ. ಅನುದಾನ ನೀಡಿದರೆ ಜನರ ಬೇಡಿಕೆಗೆ ಸ್ಪಂದಿಸಲು ಅನುಕೂಲವಾಗಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲಿಪಾಟೀಲ, ತಾಲೂಕ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಸವರಾಜ ಮಲಿ, ಅಬ್ದುಲ್ಲ ಬಾಸೀತ, ಶರಣು ಪಾಟೀಲ ಮೋತಕಪಳ್ಳಿ, ಪುರಸಭೆ ಅಧ್ಯಕ್ಷ ಆನಂದ ಟೈಗರ, ಲಕ್ಷ್ಮಿದೇವ ಕೊರವಿ, ಸಿದ್ದಪ್ಪ ಪೂಜಾರಿ, ಲಕ್ಷ್ಮಣ ಆವಂಟಿ, ಶರಣರೆಡ್ಡಿ ಚಿಮ್ಮನಚೋಡ ಮಾತನಾಡಿದರು.ವೇದಿಕೆಯಲ್ಲಿ ಚಿಮ್ಮನಚೋಡ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ನರನಾಳ, ಮಲ್ಲಿಕಾರ್ಜುನ ಪಾಟೀಲ, ಪ್ರಭುಲಿಂಗ ಲೇವಡಿ, ಸಂತೋಷ ಗುತ್ತೆದಾರ, ದೇವೇಂದ್ರಪ್ಪ ಸಾಲಹಳ್ಳಿ, ಅಜೀತ ಪಾಟೀಲ, ಜಗನ್ನಾಥ ಗುತ್ತೆದಾರ, ನರಸಿಂಹಲು ಕುಂಬಾರ, ಚಿರಂಜೀವಿ ಶಿವರಾಮಪೂರ, ಶಂಕರ ಹೆರೂರ, ಜಗನ್ನಾಥ ಹೊಸಮನಿ, ಶರಣಗೌಡ ಪಾಟೀಲ, ಅಮೃತಗೌಡ ಚಂದನಕೇರಾ, ಐನಾಪೂರ ಗ್ರಾಪಂಅಧ್ಯಕ್ಷ ನವೀನಕುಮಾರ, ಮಹ್ಮದ ಅಲಿ ನಾಯಕೋಡಿ, ಗಾರಂಪಳ್ಳಿ ಗ್ರಾಪಂ ಅಧ್ಯಕ್ಷ ಪವನ ಪಾಟೀಲ ಇದ್ದರು.
ಬಸವರಾಜ ಮಲಿ ಸ್ವಾಗತಿಸಿದರು, ಚಂದನಕೇರಾ ದತ್ತಾತ್ರೇಯ ಪಾಟೀಲ ರಾಯಗೋಳ ನಿರೂಪಿಸಿದರು, ವೀರಶೆಟ್ಟಿ ಪಾಟೀಲ ಐನಾಪೂರ ವಂದಿಸಿದರು. ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಅನೇಕ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದಾಗ ಗದ್ದಲ ಉಂಟಾಯಿತು. ಸ್ಥಳಕ್ಕೆ ಪಿಎಸ್‌ಐ ಗಂಗಮ್ಮ ಜಿನ್ನಿಕೇರಿ, ಪೋಲಿಸರು ಆಗಮಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.----
ಫೋಟೊ: ಚಿಮ್ಮನಚೋಡ ಗ್ರಾಮದಲ್ಲಿ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಬೀದರ ಸಂಸದ ಸಾಗರ ಖಂಡ್ರೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ನಾಗೇಶ್ವರರಾವ ಮಾಲಿಪಾಟೀಲ, ಬಸವರಾಜ ಮಲಿ, ಮಲ್ಲಿಕಾರ್ಜುನರೆಡ್ಡಿ ನರನಾಳ, ಲಕ್ಷ್ಮೀದೇವಿ ಕೊರವಿ ಇದ್ದರು.೨೮ಜಿಯು-ಸಿಎಚ್‌ಐ೧