ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಯಾವುದೇ ಶಾಲೆಯ ಅಭಿವೃದ್ಧಿಗೆ ಪೋಷಕರ ಸಹಕಾರವೇ ಕಾರಣವಾಗಿದ್ದು, ನಮ್ಮ ಶಾಲೆಯ ಪೋಷಕರು ಶಾಲೆಯೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಅಭಿವೃದ್ಧಿಗೆ ಶ್ರಮಿಸಿದರೆ ಟಾಪ್ ಒನ್ ಶಾಲೆ ಮಾಡುವುದಾಗಿ ನಗರದ ಗುರುರಾಘವೇಂದ್ರ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಥಾಪಕ ಕೃಷ್ಣಮೂರ್ತಿ ತಿಳಿಸಿದರು.ಗುರುರಾಘವೇಂದ್ರ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕರ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಇಪ್ಪತ್ತಾರು ವರ್ಷಗಳನ್ನು ಪೂರೈಸಿದ್ದು, ಇದಕ್ಕೆ ಪೋಷಕರ ಸಹಕಾರವೇ ಕಾರಣ. ಶಾಲೆಗೆ ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಂಬಂಧಪಟ್ಟ ಶಿಕ್ಷಕರಲ್ಲಿ ತಿಳಿದುಕೊಳ್ಳವುದರಿಂದ ಕಲಿಕೆಗೆ ಅನುಕೂಲವಾಗಲಿದೆ. ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್, ಕಂಪ್ಯೂಟರ್ ತರಗತಿ, ಕರಾಟೆ, ಸ್ಮಾರ್ಟ್‌ಕ್ಲಾಸ್, ಗ್ರಂಥಾಲಯ ಹೀಗೆ ಎಲ್ಲಾ ರೀತಿ ವಾತಾವರಣವನ್ನು ಮಕ್ಕಳಿಗೆ ಕಲ್ಪಿಸಿಕೊಡಲಾಗಿದೆ ಎಂದರು.
ನಿಮ್ಮ ಶುಲ್ಕದಲ್ಲಿ ನಮ್ಮ ಶಾಲೆಯು ನಡೆಯುತ್ತಿದ್ದು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನೀವು ಕೊಟ್ಟ ಹಣವನ್ನು ನಿಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿಯೇ ವಿನಿಯೋಗಿಸಲಾಗುತ್ತಿದೆ. ಇದೇ ರೀತಿ ನಿಮ್ಮಗಳ ಸಹಕಾರವಿದ್ದರೆ ನಮ್ಮ ಶಾಲೆಯನ್ನು ಟಾಪ್ ಒನ್ ಶಾಲೆಯನ್ನಾಗಿ ಮಾಡಲಾಗುವುದು. ನಿಮ್ಮ ಸಹಕಾರ, ಒಡನಾಟ ಹೀಗೆಯೇ ಮುಂದುವರೆಯಲಿ ಎಂದರು.ಕ್ರಿಯಾಶೀಲಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಜಯಣ್ಣ ಮಾತನಾಡಿ, ಪೋಷಕರಿಗೆ ಶಾಲೆಯೇ ಜೀವಾಳವಾಗಿದ್ದು ಸಂಸ್ಥೆ ನಡೆಸುವುದರ ಹಿಂದೆ ಎಷ್ಟು ಕಷ್ಟಗಳಿವೆ ಎಂಬುದು ಶಾಲೆ ನಡೆಸುವವರಿಗೆ ಮಾತ್ರ ಗೊತ್ತಿದೆ. ಸರ್ಕಾರದ ಕಾನೂನುಗಳ ತೊಡಕು, ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಶಾಲೆಗಳ ಸ್ಪರ್ಧೆಗಳು ಮಧ್ಯೆ ಇಂತಹ ಮಧ್ಯಮ ವರ್ಗದ ಸಂಸ್ಥೆ ನಡೆಸುವುದು ಕಷ್ಟಕರವಾಗುತ್ತಿದೆ. ಕೃಷ್ಣಮೂರ್ತಿಯವರು ಇಂತಹ ವ್ಯವಸ್ಥೆಯಲ್ಲಿಯೂ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಇಲ್ಲಿನ ಉತ್ತಮ ಶಿಕ್ಷಕ ವೃಂದ, ವಿದ್ಯಾರ್ಥಿಗಳ ಶಿಸ್ತು ಶ್ಲಾಘನೀಯ. ಸಂಸ್ಥೆ ಇನ್ನೂ ಉತ್ತಮ ಮಟ್ಟಕ್ಕೆ ಬೆಳೆಯಲಿ ಹೆಚ್ಚು ಕೀರ್ತಿ ಸಂಪಾದಿಸಲಿ ಎಂದು ಆಶಿಸಿದರು.
ಕೇಂಬ್ರಿಡ್ಜ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಮುರುಳಿಕೃಷ್ಣ ಮಾತನಾಡಿ, ರಾಜ್ಯದಲ್ಲಿ ಸುಮಾರು ೩೫ಸಾವಿರ ಖಾಸಗಿ ಶಾಲೆಗಳಿದ್ದು ಅದರಲ್ಲಿ ೨೨ಸಾವಿರ ಶಾಲೆಗಳು ಬಜೆಟ್ ಶಾಲೆಗಳಿವೆ. ಈ ಶಾಲೆಗಳು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದು ಈ ಬಗ್ಗೆ ಯಾರಿಗೂ ತಿಳಿದಿಲ್ಲ. ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಸಂಸ್ಥೆಯ ಆಡಳಿತಮಂಡಳಿಗೆ ಮಾತ್ರ ಕಷ್ಟ ತಿಳಿದಿರುತ್ತದೆ. ಇಂತಹ ಶಾಲೆಗಳ ಬಗ್ಗೆ ಸರ್ಕಾರಗಳು ಹೆಚ್ಚು ಗಮನಹರಿಸಬೇಕಿದೆ ಎಂದರು.ಗ್ರಾಮ ಪಂಚಾಯಿತಿ ಸದಸ್ಯ ಹುಚ್ಚನಹಟ್ಟಿ ಅಣ್ಣಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಪೋಷಕರಿಗಾಗಿ ರಂಗೋಲಿ ಸ್ಪರ್ಧೆ, ಸೂಪರ್ ಮಿನಿಟ್, ಕಣ್ಣಾ ಮುಚ್ಚಾಲೆ, ಜೋಡಿಹಕ್ಕಿ (ದಂಪತಿಗಳಿಗೆ), ವಾಟರ್ ಬಾಲ್, ಮೌಂಟ್‌ಸಬ್, ಬಡ್ ಟಡಾ ಟಿನ್ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪೋಷಕರು ಖುಷಿಯಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ನಂತರ ಎಲ್ಲರಿಗೂ ಹೋಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೃಷ್ಣಮೂರ್ತಿ, ಸರಸ್ವತಿ, ಪುಷ್ಪಾವತಿ, ವೀಣಾ, ಲೋಕೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು.