ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತರೆ ರಾಜ್ಯದ ಪಾಲಿಗೆ ಐತಿಹಾಸಿಕ ಕಾರ್ಯವಾಗಲಿದೆ. ಇದರಿಂದ ರಾಜ್ಯದ ರೈತರ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ. ಯೋಜನೆಗೆ ಅನುಮೋದನೆ ದೊರಕಿಸಲು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸರ್ಕಾರ ತಮಗೆ ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ನೀಡಿದ್ದು, ಸಮಯದ ಅಭಾವವಿದ್ದರೂ ಈ ಖಾತೆಗೆ ನ್ಯಾಯ ಒದಗಿಸುವ ಹಾಗೂ ಜನರ ನೆನಪಿನಲ್ಲಿ ಉಳಿಯುವಂತಹ ಮಹತ್ವದ ಕಾರ್ಯ ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಕಾರಣ ಎಂಬುದು ಸೇವೆಯಾಗಿದೆ. ರಾಜಕಾರಣಿಗಳು ಸೇವಕರ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತರೆ ರಾಜ್ಯದ ಪಾಲಿಗೆ ಐತಿಹಾಸಿಕ ಕಾರ್ಯವಾಗಲಿದೆ. ಇದರಿಂದ ರಾಜ್ಯದ ರೈತರ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ. ಯೋಜನೆಗೆ ಅನುಮೋದನೆ ದೊರಕಿಸಲು ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ಕೊಪ್ಪ ಹೋಬಳಿಯ ಎಲ್ಲಾ ಗ್ರಾಪಂಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ವಿಸಿ ನಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಈ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮಳವಳ್ಳಿ ಹಾಗೂ ತುಮಕೂರು ಭಾಗದ ಪ್ರದೇಶಗಳಿಗೂ ನೀರು ಪೂರೈಸುವ ಕುರಿತು ಯೋಜನೆ ರೂಪಿಸುವ ಚಿಂತನೆ ಇದೆ ಎಂದರು.

ಹೋಬಳಿಯಲ್ಲಿ ನೂತನ ನಾಡಕಚೇರಿ, ಪೊಲೀಸ್ ಠಾಣೆ ಹಾಗೂ ಪ್ರವಾಸಿ ಮಂದಿರ ನಿರ್ಮಾಣ ಮಾಡುವ ಕುರಿತು ಚರ್ಚೆ ನಡೆದಿದೆ. ಆದರೆ, ಸೂಕ್ತ ಜಾಗದ ವಿಚಾರವಾಗಿ ಕೆಲ ಗೊಂದಲಗಳಿಂದ ಕಾಮಗಾರಿಗಳು ವಿಳಂಬವಾಗುತ್ತಿವೆ. ಜನರ ಸಹಕಾರದಿಂದ ಅಗತ್ಯ ಕಟ್ಟಡ ನಿರ್ಮಿಸಲಾಗುವುದು ಎಂದರು.

ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಸ್ತುತ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಲದ ಮಿತಿ 10 ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ನಾಗಮಂಗಲ ಕ್ಷೇತ್ರದ ಜನರು ನನ್ನ ಹಾಗೂ ತಮ್ಮ ತಂದೆ ಮೇಲೆ ತೋರಿಸುತ್ತಿರುವ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ. ಸಹಕಾರ ಕ್ಷೇತ್ರದ ಮೂಲಕ ಜಿಲ್ಲೆಯ ಜನರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ನಂತರ ನಮ್ಮ ಭಾಗದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಎನ್.ಚಲುವರಾಯಸ್ವಾಮಿ. 8 ಗ್ರಾಪಂ ವ್ಯಾಪ್ತಿಯಲ್ಲಿ 200 ಕೋಟಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮುಖಂಡರಾದ ಕುಮಾರ್ ಕೊಪ್ಪ, ಸ್ವಾಮಿಗೌಡ, ದಿವಾಕರ್, ರಮೇಶ್ ಗೌಡ, ಸಿದ್ದೇಗೌಡ, ಸುಧಾ, ಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.