ಹಗರಿಬೊಮ್ಮನಹಳ್ಳಿ: ಜಿಲ್ಲಾದ್ಯಂತ ಬರ ತಾಂಡವವಾಡುತ್ತಿದೆ. ರೈತರ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನ ಸೆಳೆದು ರೈತರ ಹಿತಾಸಕ್ತಿ ಕಾಪಾಡುತ್ತೇನೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಭರವಸೆ ನೀಡಿದರು.
ತಾಲೂಕಿನ ವರದಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಚನ್ನಪ್ಪ ಅವರ ಮೆಕ್ಕೆಜೋಳದ ಬೆಳೆ ನಷ್ಟ ಪರಿಶೀಲಿಸಿ ಮಾತನಾಡಿದರು.ಮೈಕ್ರೋ ಫೈನಾನ್ಸ್ ಸೇರಿದಂತೆ ನಾನಾ ಮೂಲಗಳಿಂದ ರೈತರು ಸಾಲ ಪಡೆದಿದ್ದಾರೆ. ಸಾಲ ಪಾವತಿಸುವಂತೆ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಈ ಕುರಿತು ಕೂಡಲೇ ಕ್ರಮ ವಹಿಸಬೇಕು. ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡುವ ಜೊತೆಗೆ ತಾಲೂಕಿನ ೧೨ ಏತ ನೀರಾವರಿ ಯೋಜನೆಗಳ ಸುಸ್ಥಿತಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಆಗ್ರಹಿಸಿದರು.ಜಾನುವಾರುಗಳಿಗೆ ಮೇವು ಪೂರೈಸಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಸಹಿತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸೀಗೇನಹಳ್ಳಿ ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಬಂಟರ ಕುಬೇರ್ ಹಾಗೂ ತಳವಾರ ಸೋಮು ಒತ್ತಾಯಿಸಿದರು.
ಇದೇ ವೇಳೆ ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು. ರೈತರ ಬೇಡಿಕೆಗಳ ಕುರಿತು ಸಚಿವರು ಪ್ರತಿಕ್ರಿಯಿಸಿ ಈ ಭಾಗದ ಏತ ನೀರಾವರಿ ಯೋಜನೆಗಳ ಬಲವರ್ಧನೆಗೆ ಅಗತ್ಯ ಅನುದಾನ ಕಲ್ಪಿಸುವುದರ ಜೊತೆಗೆ ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಮುಖ್ಯ ಕಾರ್ಯದರ್ಶಿ ನೋಂಗ್ಜಾಯ್ ಮಹಮದ್ ಆಲಿ ಅಕ್ರಂ ಷಾ, ಕೃಷಿ ಇಲಾಖೆಯ ಜಂಟಿ ನಿರ್ದೆಶಕ ಮಂಜುನಾಥ್, ಸಹಾಯುಕ ಆಯುಕ್ತ ವಿವೇಕಾನಂದ್, ತಹಸೀಲ್ದಾರ್ ಆರ್. ಕವಿತಾ, ತಾಪಂ ಇಒ ಪಿ. ವಿಶ್ವನಾಥ್, ವಿಬಿಜಿರಾಮ್‌ಜಿ ಎಡಿ ರಮೇಶ ಮಹಾಲಿಂಗಪುರ, ಕೃಷಿ ಎಡಿ ಎಸ್.ಬಿ. ಪಾಟೀಲ್, ತೋಟಗಾರಿಕೆಯ ವಿಜಯ ನಿಚ್ಚಾಪುರ, ಕೃಷಿ ಅಧಿಕಾರಿಗಳಾದ ಭೋಜ್ಯಾನಾಯ್ಕ, ಟಿ. ಶಶಿಕುಮಾರ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಹನಸಿ ದೇವರಾಜ್, ರೈತ ಸಂಘದ ಗೋಣಿ ಬಸಪ್ಪ, ರವಿಕುಮಾರ್ ತಂಬ್ರಹಳ್ಳಿ ಸೇರಿದಂತೆ ಮತ್ತಿತರರಿದ್ದರು.