ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ರಾಜಕಾರಣದಲ್ಲಿ ಜೂ.1ರಿಂದ ಭಾರೀ ಬದಲಾವಣೆ ಗಾಳಿ ಬೀಸುವುದು ಖಚಿತವಾಗಿದ್ದು, ಇನ್ನು 3 ದಶಕ ನಾನು ಇಲ್ಲಿಂದ ಕದಲುವುದಿಲ್ಲ. ಸ್ವಾಭಿಮಾನಿಗಳಾಗಿ ನಾವೆಲ್ಲರೂ ಸಂಘಟಿತರಾಗಿ ಬಂಡವಾಳ ಶಾಹಿ ರಾಜಕಾರಣಕ್ಕೆ ಮುಕ್ತಿ ಹಾಡೋಣ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಕರೆ ನೀಡಿದ್ದಾರೆ.ನಗರದ ಬಂಟರ ಸಮುದಾಯ ಭವನದಲ್ಲಿ ಶನಿವಾರ ಮತದಾರರಿಗೆ ಕೃತಜ್ಞತಾ ಸಮಾರಂಭ ಹಾಗೂ ಇದು ಅಂತ್ಯವಲ್ಲ, ಆರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಉದ್ಯಮಿಗಳಾಗಿ ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡಿದ್ದಾರೆ. ನೂರಾರು ಕೋಟಿ ಚೆಲ್ಲಿ ಗೆಲ್ಲುವ ವ್ಯವಸ್ಥೆಯನ್ನು ನಾವೆಲ್ಲರೂ ಸೇರಿ ಬದಲಾಯಿಸೋಣ ಎಂದರು.
ಜೂ.1ರ ನಂತರ ಜಿಲ್ಲೆಯ ಪ್ರತಿ ಶಾಲೆ, ಕಾಲೇಜಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿ ಹಂತದಲ್ಲೇ ರಾಜಕೀಯ ಪ್ರಜ್ಞೆ ಮೂಡಿಸುತ್ತೇನೆ. ಶಿಕ್ಷಣದ ಮಹತ್ವ ತಿಳಿಸುವ ಕೆಲಸ ನಿರಂತರವಾಗಿ ಈ ಜಿಲ್ಲೆ, ಕ್ಷೇತ್ರದಲ್ಲಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.ಕ್ಷೇತ್ರಾದ್ಯಂತ ಪಾದಯಾತ್ರೆ ಮೂಲಕ 300 ಹಳ್ಳಿ, ಕಾಲ್ನಡಿಗೆಯಲ್ಲಿ 600 ಹಳ್ಳಿಗೆ ಹೋಗಿದ್ದೇನೆ. ನಾನ್ಯಾರಿಗೂ ಮೋಸ ಮಾಡಿಲ್ಲ, ಡೀಲ್ ಆಗಿಲ್ಲ, ನಾನು ಕ್ರಾಂತಿ ಮಾಡಲೆಂದು ಬಂದಿದ್ದೇನೆಯೇ ಹೊರತು ಯಾರ ವಿರುದ್ಧ ಯುದ್ಧ ಮಾಡುವುದಕ್ಕಲ್ಲ. 3 ಲಕ್ಷ ಮತಗಳು ಸಿಕ್ಕರೆ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದಂತೆ. ಒಂದು ರುಪಾಯಿ ಸಹ ಮುಟ್ಟದೇ, ರಾಷ್ಟ್ರೀಯ ಪಕ್ಷಗಳನ್ನು ಎದುರು ಹಾಕಿಕೊಂಡು, ನನ್ನ ಪರ ಮತ ಚಲಾಯಿಸಿ, ಆಶೀರ್ವದಿಸಿದ್ದೀರಿ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿದೆ ಎಂದರು.
ಹರಿಹರ, ಹೊನ್ನಾಳಿ, ದಾವಣಗೆರೆ ದಕ್ಷಿಣ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಇದೆ. ಚುನಾವಣೆಗೆ ಇನ್ನೂ 4 ವರ್ಷ ಇದ್ದು, ಪಕ್ಷ ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೂ ಕಣಕ್ಕಿಳಿಯುತ್ತೇನೆ ಎಂದು ತಿಳಿಸಿದರು.ಯುವ ಮುಖಂಡ ಶರತ್ ಕುಮಾರ್, ರಂಗಸ್ವಾಮಿ, ಅಹಿಂದ ಮುಖಂಡರಾದ ಕೃಷ್ಣಪ್ಪ, ಮಂಜಪ್ಪ, ರಾಜು ಮೌರ್ಯ, ಷಣ್ಮುಖಪ್ಪ, ಮುತ್ತಿಗೆ ಜಂಬಣ್ಣ, ಗೌರಿಪುರ ನಾಗರಾಜ, ರವಿ, ಸೇರಿ ಹರಪನಹಳ್ಳಿ, ಜಗಳೂರು, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ, ಜಗಳೂರು, ದಾವಣಗೆರೆಯ ಸಾವಿರಾರು ಜನ ಪಾಲ್ಗೊಂಡಿದ್ದರು.
ಪೆನ್ ಡ್ರೈವ್ ಚರ್ಚೆ ಒಳ್ಳೆಯದಲ್ಲ ದಾವಣಗೆರೆ: ಊರಿನ, ರಾಜ್ಯದ ಅಭಿವೃದ್ಧಿ, ಮಕ್ಕಳ ಶಿಕ್ಷಣದ ಬಗ್ಗೆ ಚರ್ಚೆಯಾಗದೇ, ಪೆನ್ ಡ್ರೈವ್ ವಿಚಾರ, ಯಾರದ್ದೋ ಬಂಧನ, ಬಿಡುಗಡೆ ಇಂತಹ ವಿಚಾರಗಳೇ ರಾಜಕಾರಣದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ ಎಂದು ಜಿ.ಬಿ.ವಿನಯಕುಮಾರ ಬೇಸರ ವ್ಯಕ್ತಪಡಿಸಿದ್ದಾರೆ.ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿ, ರಾಜಕಾರಣದಲ್ಲಿ ನಾನು ಕೆಳಮಟ್ಟದಿಂದ ಬಂದಿದ್ದು, ನಾನು ಪಟ್ಟ ಶ್ರಮ, ಜನಾಶೀರ್ವಾದದಿಂದ ನನ್ನ ಹೆಸರು ದೆಹಲಿಗೆ ಹೋಗುತ್ತದೆ. ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದರಿಂದ, ಪಾದಯಾತ್ರೆ ಕೈಗೊಂಡಿದ್ದರಿಂದ ನನ್ನ ಹೆಸರು ಅಲ್ಲಿ ಪ್ರಸ್ತಾಪವಾಗಿತ್ತು ಎಂದರು.
ಜಿಲ್ಲೆಯ ಶೇ.99ರ ಜನ ಕನಸು ನನಗೆ ಟಿಕೆಟ್ ಸಿಗಬೇಕೆಂಬುದಾಗಿತ್ತು. ರಾತ್ರಿ-ಕತ್ತಲೆ ಆಟದಂತೆ ನನಗೆ ಟಿಕೆಟ್ ತಪ್ಪಿತು. ಈ ಕ್ಷೇತ್ರದ ಸಂಸದನಾಗಬೇಕೆಂಬ ಕನಸು ಕಂಡಿದ್ದೆ. ನನ್ನ ಕನಸು ಸಾಕಾರಗೊಳ್ಳುತ್ತದೆಂಬ ವಿಶ್ವಾಸವೂ ನನಗಿದೆ ಎಂದು ತಿಳಿಸಿದರು. ಡಾ.ಪ್ರಭಾ ಮಲ್ಲಿಕಾರ್ಜುನ, ಗಾಯತ್ರಿ ಸಿದ್ದೇಶ್ವರ ಬಗ್ಗೆ ನನಗೇನೂ ದ್ವೇಷವಿಲ್ಲ. ಅವರಿಗೂ ನನ್ನ ಮೇಲೆ ದ್ವೇಷವಿಲ್ಲ. ಇಬ್ಬರೂ ಗೌರವಯುತವಾಗಿ ಮಾತನಾಡಿಸಿದ್ದಾರೆ. ಸಚಿವರೊಂದಿಗೆ 2 ಗಂಟೆ ಚರ್ಚೆ ನಡೆಸಿದಾಗಲೂ ವಿನಯವಾಗಿ ಮಾತನಾಡಿದ್ದಾರೆ. ದ್ವೇಷ ರಾಜಕಾರಣ ಮಾಡುತ್ತಿಲ್ಲ, ನನ್ನದೇನಿದ್ದರೂ ಸ್ವಾಭಿಮಾನಿ ಹೋರಾಟ- ಜಿ.ಬಿ.ವಿನಯಕುಮಾರ, ದಾವಣಗೆರೆ ಪಕ್ಷೇತರ ಅಭ್ಯರ್ಥಿ.
ದಾವಣಗೆರೆಯಲ್ಲಿ ಇನ್ನು 3 ತಿಂಗಳಲ್ಲಿ ಸುಸಜ್ಜಿತ ಐಎಎಸ್ ಸಂಸ್ಥೆ ಆರಂಭಿಸುತ್ತೇನೆ. ಬಡವರ ಮಕ್ಕಳೂ ಉನ್ನತ ಅಧಿಕಾರಿ ಆಗಬಹುದು ಎಂಬುದನ್ನು ತೋರಿಸುತ್ತೇನೆ. ನಾನು ಓಡಾಡಲು ಶುರು ಮಾಡಿದ ಮೇಲೆ ಅಧಿಕಾರದಲ್ಲಿದ್ದವರು ಓಡಾಡಲು ಶುರು ಮಾಡಿದ್ದಾರೆ. ಜಿಲ್ಲೆಯ ಹಳ್ಳಿಗಳಿಗೆ ಭೇಟಿ ನೀಡಿದ ಮೇಲೆ ಅವರೂ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆವಿನಯಕುಮಾರ, ಪಕ್ಷೇತರ ಅಭ್ಯರ್ಥಿ