ತುಂಗಭದ್ರಾ ಜಲಾಶಯದಿಂದ ರೈತರಿಗೆ ನೀರು ಬಿಡುಗಡೆ ಮಾಡುವ ವಿಷಯವೇ ಈಗ ಅತ್ಯಂತ ಪ್ರಮುಖವಾಗಿದೆ. ಸಚಿವ ಸ್ಥಾನ ನೀಡುವ ಸಂತೋಷಕ್ಕಿಂತ ರೈತರ ಹೊಲಗಳಿಗೆ ನೀರು ಹರಿದು ಬೆಳೆ ಉಳಿದಾಗ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೇಳಿದರು.

ಕಂಪ್ಲಿ: ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ನಾನು ಪ್ರತಿಭಟನೆ ನಡೆಸುವುದಿಲ್ಲ. ಪಕ್ಷ ನನ್ನನ್ನು ಗುರುತಿಸಿ ಸಚಿವ ಸ್ಥಾನವಾಗಲಿ ಅಥವಾ ಯಾವುದೇ ಹೊಣೆಗಾರಿಕೆಯಾಗಲಿ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ತೀರ್ಮಾನಕ್ಕೆ ತಾವು ಬದ್ಧರಾಗಿದ್ದು, ವೈಯಕ್ತಿಕ ಹುದ್ದೆಗಿಂತ ಜನರ ಸಮಸ್ಯೆಗಳ ಪರಿಹಾರವೇ ಮುಖ್ಯ ಎಂದು ಹೇಳಿದರು.

ತುಂಗಭದ್ರಾ ಜಲಾಶಯದಿಂದ ರೈತರಿಗೆ ನೀರು ಬಿಡುಗಡೆ ಮಾಡುವ ವಿಷಯವೇ ಈಗ ಅತ್ಯಂತ ಪ್ರಮುಖವಾಗಿದೆ. ಸಚಿವ ಸ್ಥಾನ ನೀಡುವ ಸಂತೋಷಕ್ಕಿಂತ ರೈತರ ಹೊಲಗಳಿಗೆ ನೀರು ಹರಿದು ಬೆಳೆ ಉಳಿದಾಗ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದರು.

ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ 65 ಟಿಎಂಸಿ ನೀರಿನ ಮಟ್ಟ ತಲುಪಿದ ಬಳಿಕ ನೀರು ಬಿಡುಗಡೆ ಮಾಡಲು ಸಾಧ್ಯವಿದೆ ಎಂಬ ಮಾಹಿತಿ ದೊರೆತಿದೆ. ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಕ್ಷೇತ್ರದ ರೈತರು ನೀರು ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ. ಹಲವರು ಈಗಾಗಲೇ ಸಸಿ ಮಡಿ ಹಾಕಿಕೊಂಡಿದ್ದು, ಮಳೆ ಕೊರತೆಯಿಂದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವ ನಿರೀಕ್ಷೆ ಇದೆ. ತುರ್ತಾಗಿ ಸಭೆ ಕರೆದು ರೈತರ ಹಿತದೃಷ್ಟಿಯಿಂದ ನೀರು ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತುಂಗಭದ್ರಾ ಅಂತರ ರಾಜ್ಯ ನಿಯಂತ್ರಣ ಸಮಿತಿ (ಐಸಿಸಿ) ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವ ಬದಲು ಮುನಿರಾಬಾದಿನಲ್ಲಿ ನಡೆಸಬೇಕು. ಸಭೆ ಸ್ಥಳೀಯವಾಗಿ ನಡೆದರೆ ರೈತರ ಅಭಿಪ್ರಾಯ ಮತ್ತು ಸಮಸ್ಯೆಗಳನ್ನು ನೇರವಾಗಿ ಆಲಿಸಲು ಅನುಕೂಲವಾಗುತ್ತದೆ. ಆಂಧ್ರ ಪ್ರದೇಶದ ಅಧಿಕಾರಿಗಳ ಒತ್ತಡಕ್ಕೆ ಮಣಿದು ಬೆಂಗಳೂರಿನಲ್ಲಿ ಸಭೆ ನಡೆಸಬಾರದು. ಈ ಕುರಿತು ಮುಖ್ಯಮಂತ್ರಿ ಹಾಗೂ ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವರ ಗಮನಕ್ಕೆ ಮತ್ತೆ ತರಲಾಗುವುದು ಎಂದು ಹೇಳಿದರು.

ಶೀಘ್ರದಲ್ಲಿಯೇ ಕ್ಷೇತ್ರದ ರೈತರ ಸಭೆ ನಡೆಸಿ ಅವರ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಜೊತೆಗೆ ಬರಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಆಗಮಿಸುವ ತಂಡಕ್ಕೆ ಕ್ಷೇತ್ರದ ನೈಜ ಪರಿಸ್ಥಿತಿ, ರೈತರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ನೀರಿನ ಸಮಸ್ಯೆ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಇನ್ನೂ ಸಚಿವ ಸಂಪುಟದಲ್ಲಿ ಒಂದು ಸ್ಥಾನ ಖಾಲಿಯಿದ್ದು, ಆ ಸ್ಥಾನವನ್ನು ಮಹಿಳಾ ಪ್ರತಿನಿಧಿಗೆ ನೀಡುವ ಸಾಧ್ಯತೆ ಇದೆ. ಪಕ್ಷದ ತೀರ್ಮಾನ ಗೌರವಿಸುವುದಾಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಹಾಗೂ ಚಾನಾಳ್ ಚನ್ನಬಸವರಾಜಗೌಡ ಉಪಸ್ಥಿತರಿದ್ದರು.