ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾನು ಜೆಡಿಎಸ್ ಶಾಸಕ ಎಂಬ ಕಾರಣಕ್ಕೆ ಈ ಸರ್ಕಾರ ಅನುದಾನ ನೀಡುತ್ತಿಲ್ಲ. 2028ಕ್ಕೆ ನಮ್ಮ ಸರ್ಕಾರ ಬರುವುದು ಸೂರ್ಯ, ಚಂದ್ರ ಇರುವಷ್ಟೇ ಸತ್ಯ. ನಿಮ್ಮೆಲ್ಲರ ಪ್ರೀತಿ, ಅಭಿಮಾನ ಹಾಗೂ ಸಹಕಾರದಿಂದ ನಾನು ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಿ ಜನರ ಋಣ ತೀರಿಸುವ ಕೆಲಸ ಮಾಡುವುದಾಗಿ ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ಪುರಸಭೆ ಆವರಣದಲ್ಲಿ ಶಾಸಕ ಎಚ್.ಟಿ.ಮಂಜು ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರಿಂದ ನಡೆದ ಅದ್ಧೂರಿ ಅಭಿಮಾನೋತ್ಸವದಲ್ಲಿ ಮಾತನಾಡಿದ ಅವರು, ನಾನು ಕಷ್ಟದ ಸಮಯದಲ್ಲಿ ಶಾಸಕನಾಗಿದ್ದೇನೆ. ಜಿಲ್ಲೆಯಲ್ಲಿ ನಾನೊಬ್ಬನೇ ಜೆಡಿಎಸ್ ಶಾಸಕ. ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಹೊರತು ಪಡಿಸಿ ಉಳಿದ ಎಲ್ಲಾ ಶಾಸಕರು ಸಭೆ ನಡೆಸಿ ಅಭಿವೃದ್ಧಿ ಕೆಲಸ ಮಾಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಈ ಹಿಂದೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೆ. ಸದನದಲ್ಲೂ ಗಮನ ಸೆಳೆದಿದ್ದೆ. ಆದರೆ, ಅನುದಾನ ನೀಡಿಕೆ ವಿಚಾರದಲ್ಲಿ ತಾರತಮ್ಯ ಮಾಡಿತು. ಕಾಂಗ್ರೆಸ್ ಸರ್ಕಾರ ಕ್ಷೇತ್ರಕ್ಕೆ ನಿರೀಕ್ಷೆಯಷ್ಟು ಅನುದಾನ ಹಂಚಿಕೆ ಮಾಡಿಲ್ಲ ಎಂದು ದೂರಿದರು.ಶಾಸಕನಾಗಿ ಕಳೆದ ಮೂರು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಮೂರು ಬಾರಿ ಶಾಸಕನಾಗಿಲ್ಲ. ಸಚಿವನಾಗಿಲ್ಲ. ಮೊದಲ ಬಾರಿ ಆಯ್ಕೆಯಾಗಿ ಸಾಧ್ಯವಾದಷ್ಟು ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ಮುಂದೆ ಮತ್ತೆ ಶಾಸಕನಾಗುತ್ತೇನೆ. ಆ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕನಸು ನನಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡರ ಪಕ್ಷವಲ್ಲ ಕಾರ್ಯಕರ್ತರ ಪಕ್ಷ ಎಂಬುದನ್ನು ಸಾಬೀತು ಪಡಿಸಿದ್ದೀರಿ. ಕುಮಾರಣ್ಣ ಕೇಂದ್ರ ಸಚಿವರಾದ ನಂತರ ಮಂಡ್ಯಕ್ಕೆ ಕಾರ್ಖಾನೆಗಳನ್ನು ತಂದು ಅಭಿವೃದ್ಧಿ ಪಡಿಸಬೇಕು ಎಂಬ ಕನಸು ಕಂಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಕುಮಾರಣ್ಣನಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಕಾರ್ಖಾನೆಗೆ ಜಾಗ ಕೊಡುತ್ತಿಲ್ಲ ಎಂದು ಆರೋಪಿಸಿದರು.
ನಾನು ಸಾಮಾನ್ಯ ರೈತನ ಮಗ. 1975 ರಲ್ಲಿ ಮುನಿಯಪ್ಪನ ಹಬ್ಬದ ದಿನ ಜನಿಸಿರುವುದಾಗಿ ನಮ್ಮ ತಂದೆ ಹೇಳಿದ್ದರು. ನಮ್ಮ ತಂದೆ ತಾಯಿ ಕೂಡ ಅನಕ್ಷರಸ್ಥರು. ಅವರು ನಮ್ಮ ಜನ್ಮ ದಿನ ಬರದಿಡುವ ಸ್ಥಿತಿಯಲ್ಲೂ ಇರಲಿಲ್ಲ. ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರು ಸ್ವಯಂ ಪ್ರೇರಿತರಾಗಿ ಹುಟ್ಟುಹಬ್ಬ ಆಚರಣೆ ಆಯೋಜಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 800 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪೌರ ಕಾರ್ಮಿಕರು, ಆಟೋ ಚಾಲಕರು, ಪ್ರಗತಿ ಪರ ರೈತರಿಗೆ ಸನ್ಮಾನಿಸಿದ್ದೇವೆ. ಮಹಿಳೆಯರಿಗೆ ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಲಕರಣೆಗಳ ವಿತರಿಸಿದ್ದೇವೆ ಎಂದರು.ಶಾಸಕ ಎಚ್.ಟಿ.ಮಂಜು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಪ್ರಮುಖ ಸ್ಥಳಗಳು, ಗ್ರಾಮಾಂತರ ಪ್ರದೇಶಗಳು ಮತ್ತು ಸಾರ್ವಜನಿಕ ಜಾಗಗಳಲ್ಲಿ ಶುಭಾಶಯ ಬ್ಯಾನರ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಶಾಸಕರ ಸೇವೆ ಸ್ಮರಿಸಿ ಶುಭಾಶಯಗಳನ್ನು ಸಲ್ಲಿಸಿದರು.
ಶಾಸಕ ಮಂಜುರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆಟೋ ಚಾಲಕರು ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ ಸೇರಿ ಹಲವು ಸಮಾಜಮುಖಿ ಕಾರ್ಯಕ್ರಮಗಳು ನಡೆದವು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಮಹಿಳೆಯರಿಗೆ ಸೀರೆ ಉಡುಗೊರೆ ನೀಡಲಾಯಿತು. ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಖುದ್ದು ಶಾಸಕರೇ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಮಾಂಸಹಾರಿ, ಸಸ್ಯಹಾರಿ ಊಟವನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು.