ಬಲ್ಡೋಟ ಕಾರ್ಖಾನೆ ತೊಲಗಿಸಿ, ಮಾಲಿನ್ಯ ನಿಯಂತ್ರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಲ್ಡೋಟ ಕಾರ್ಖಾನೆಯಿಂದ ಕೊಪ್ಪಳ ಜನರಿಗೆ ಭವಿಷ್ಯದಲ್ಲಿ ಎದುರಾಗುವ ತೊಂದರೆಗಳ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು.

ಕೊಪ್ಪಳ: ಬಲ್ಡೋಟ ಕಾರ್ಖಾನೆ ತೊಲಗಿಸಿ, ಮಾಲಿನ್ಯ ನಿಯಂತ್ರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಲ್ಡೋಟ ಕಾರ್ಖಾನೆಯಿಂದ ಕೊಪ್ಪಳ ಜನರಿಗೆ ಭವಿಷ್ಯದಲ್ಲಿ ಎದುರಾಗುವ ತೊಂದರೆಗಳ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ನಡೆದ 380ನೇ ದಿನದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಪ್ಪಳದ ಜನರ ಕಾರ್ಖಾನೆ ಮಾಲಿನ್ಯ ವಿರೋಧಿ ಹೋರಾಟಕ್ಕೆ ನಾಡಿನ ಸಾಹಿತಿಗಳು, ಪ್ರಗತಿಪರರು, ಸ್ವಾಮೀಜಿಗಳು ಹಾಗೂ ಹೋರಾಟಗಾರರು ಬೆಂಬಲ ನೀಡಿದ್ದಾರೆ. ಇದು ಜನರ ಬದುಕು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟವಾಗಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಬರದ ತೀವ್ರತೆಯಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಹಳ್ಳ, ತೊರೆಗಳು ಬತ್ತಿಹೋಗಿವೆ. ಬಂಡವಾಳಶಾಹಿ ವ್ಯವಸ್ಥೆ ಜನರ ಬದುಕನ್ನು ಕಡೆಗಣಿಸಿ ತನ್ನ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಸರ್ಕಾರದ ಮೇಲೆ ಮಾತ್ರ ಅವಲಂಬಿತರಾಗದೆ ನ್ಯಾಯಕ್ಕಾಗಿ ಚಳವಳಿಯ ಮೂಲಕ ಹೋರಾಡಬೇಕಿದೆ ಎಂದು ಹೇಳಿದರು.

ಬಲ್ಡೋಟ ಸಮಸ್ಯೆ ಕುರಿತು ಜಿಲ್ಲೆಯ ಶಾಸಕರು ಹಾಗೂ ಸಚಿವರೊಂದಿಗೆ ಚರ್ಚಿಸುವೆ. ಬೆಳಗಾವಿ ಅಧಿವೇಶನಕ್ಕೆ ಹೋರಾಟಗಾರರೂ ಆಗಮಿಸಿ. ಮುಖ್ಯಮಂತ್ರಿಗಳ ಭೇಟಿಗೆ ನಿಯೋಗದ ವ್ಯವಸ್ಥೆ ಮಾಡಿಸುವೆ. ಹೋರಾಟ ಗೆಲ್ಲುವವರೆಗೂ ನಿಮ್ಮೊಂದಿಗಿರುತ್ತೇನೆ ಎಂದು ಭರವಸೆ ನೀಡಿದರು.

ಚಿಂತಕ ಅಪ್ಪಾಸಾಬ್ ಯರನಾಳ, ಬರಹಗಾರ ಅಲಿಬಾಬಾ ಮಾತನಾಡಿ, ಧರಣಿಗೆ ಬೆಂಬಲ ವ್ಯಕ್ತಪಡಿಸಿದರು.

ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಮಲ್ಲಿಕಾರ್ಜುನ ಬಿ. ಗೋನಾಳ, ರವಿಕಾಂತನವರ, ಮೂಕಣ್ಣ ಮೇಸ್ತ್ರಿ, ನಾಗರಾಜ ಎಲಿಗಾರ, ಯಮನೂರಪ್ಪ ಹಾಲಳ್ಳಿ, ಹನುಮಂತ ತಳವಾರ, ವೆಂಕಣ್ಣಾಚಾರ ಕಟ್ಟಿ, ಮಹಾದೇವಪ್ಪ ಮಾವಿನಮಡು, ಮಲ್ಲಪ್ಪ ಮಾದಿನೂರು, ರಮೇಶ ಬಿ., ಕುಸುಮಾಬೀಬಿ, ಹಖೀಂ ಅಲಿ, ಕನಕಪ್ಪ ಡಿ.ಎ., ಪರ್ವಿನ್, ಮೆಹಬೂಬ, ಚನ್ನಮ್ಮ ಆಡಿನ್, ರತ್ನಮ್ಮ, ಗಂಗಮ್ಮ, ಜಬಿನಾಬೀ ಇದ್ದರು.