ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯ ಸರ್ಕಾರದ ನಾಲ್ಕೈದು ಮಂದಿ ಬೀದಿಯಲ್ಲಿ ಹೋಗುವ ಮಂತ್ರಿಗಳು ನನ್ನ ವಿರುದ್ಧ ಇಲ್ಲದ ಷಡ್ಯಂತ್ರ ಮಾಡಿ ಜನರ ಹಾಗೂ ನನ್ನ ನಡುವೆ ಕಂದಕ ಸೃಷ್ಟಿ ಮಾಡಲು ಹೊರಟಿದ್ದಾರೆ. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗುಡುಗಿದರು.ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಆದಿಚುಂಚನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದು ಯಾವುದೇ ತೀರ್ಮಾನ ಆಗದೇ ಇದ್ದರೂ ಕೂಡ ನನ್ನನ್ನು ಆರೋಪಿ ಮಾಡಲು ಹೊರಟಿದ್ದಾರೆ. ನನ್ನ ಮೇಲಿನ ಆರೋಪ ಎಲ್ಲಾ ಮುಗಿಯಲಿ, ಅದೆಲ್ಲಾ ಮುಗಿದ ನಂತರ ಈ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಮೈಸೂರು ಪಾದಯಾತ್ರೆಗೆ ನಾನು ಹೋಗಿದ್ದೆ, ಪಾದಯಾತ್ರೆಯಲ್ಲಿ ನಾನು ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದೇನೆ ಅಷ್ಟೆ ಎಂದರು.
ಇವರ ಬಗ್ಗೆ ನಾನೇನು ಮಾತಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೂ ನಾನು ಒತ್ತಾಯ ಮಾಡಿಲ್ಲ. ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ. ಸಿದ್ದರಾಮಯ್ಯ ಅವರಿಗೆ ನಾನು ಏನೂ ಹೇಳಲ್ಲ. ಆದರೆ, ಕುಮಾರಸ್ವಾಮಿ ಏನೋ ಮಾಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ನೈತಿಕತೆ ಏನು ಅನ್ನೊದು ಕ್ಲಿಯರ್ ಆಗಬೇಕು ಎಂದರು.ಗ್ರೇಟ್ ಪಾಲಿಟಿಷಿಯನ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಅದೇಲ್ಲಾ ಕ್ಲಿಯರ್ ಆದ ಬಳಿಕ ಮಾತಾಡುತ್ತೇನೆ. ಸಿಎಂ ನೈತಿಕಹೊಣೆ ಹೊರಲಿಲ್ಲ ಅಂದ್ರೆ ನಾನು ಹೇಳೊಕೆ ಆಗುವುದಿಲ್ಲ. ನನ್ನನ್ನು ಇಕ್ಕಟ್ಟಿಗೆ ಸಿಗಿಸಲು ಹೋಗಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವವನಲ್ಲ. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ನಾಲ್ಕೈದು ಮಂದಿ ಬಿಡಾಡಿ ಮಂತ್ರಿಗಳು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಷಡ್ಯಂತ್ರ ನಡೆಸುತ್ತಿದ್ದಾರೆ. ನಾನು ಇದನ್ನು ಷಡ್ಯಂತ್ರ ಅನ್ನಲ್ಲಾ, ಈ ಕುಮಾರಸ್ವಾಮಿ ಕೇಂದ್ರ ಸಚಿವನಾಗಿರೋದನ್ನು ಸಹಿಸಲು ಅವರಿಗೆ ಆಗುತ್ತಿಲ್ಲ. ಜನರ ಮಧ್ಯೆ ಕಂದಕ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ. ಯಾವ ಬಿಡಾಡಿ ಮಂತ್ರಿಗಳಿಂದ ನನ್ನನ್ನು ಏನು ಮಾಡೋಕೂ ಆಗಲ್ಲ ಇದನ್ನು ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಹೇಳುತ್ತೇನೆ ಎಂದರು.ಸತ್ಯಕ್ಕೆ ದೊರಕಿದ ಗೆಲುವು: ಡಾ.ಅಶ್ವಥನಾರಾಯಣರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಇದರಿಂದಾಗಿ ಸತ್ಯವನ್ನು ಎತ್ತಿಹಿಡಿಯುವ ಕೆಲಸವಾಗಿದೆ. ಪಾರದರ್ಶಕ ತನಿಖೆ ನಡೆದರೆ ಸತ್ಯಕ್ಕೆ ಗೆಲುವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ ಹೇಳಿದರು.
ಸಿದ್ದರಾಮಯ್ಯ ವಿರುದ್ಧದ ತೀರ್ಪು ಕುರಿತಾಗಿ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ, ಪ್ರಕರಣದ ಬಗ್ಗೆ ರಾಜ್ಯದ ಎಲ್ಲಾ ಜನರಿಗೂ ಗೊತ್ತಿದೆ. ಸಿಎಂ ಅವರ ಕೈವಾಡ, ಅಧಿಕಾರ ದುರ್ಬಳಕೆ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯದ ಜನರು ಆಗ್ರಹಿಸುತ್ತಿದ್ದಾರೆ. 50ವರ್ಷಕ್ಕಿಂತ ಹೆಚ್ಚು ರಾಜಕೀಯ ಅನುಭವವಿರುವ ಹಿರಿಯ ರಾಜಕಾರಣಿ, ನೈತಿಕತೆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ವ್ಯಕ್ತಿ ಅವರ ವಿಚಾರ ಬಂದಾಗ ಸತ್ಯಕ್ಕೆ ನಿಜವಾದ ಗೌರವ ಕೊಡುತ್ತಾರೆಂದರೆ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.