ಬಿಜೆಪಿ ಅವಧಿಯ ರಾಬರಿ, ಕಳ್ಳತನದ ಪಟ್ಟಿ ಬಹಿರಂಗ ಮಾಡುತ್ತೇನೆ : ಗೃಹ ಸಚಿವ ಡಾ. ಪರಮೇಶ್ವರ್

| Published : Jan 24 2025, 12:47 AM IST / Updated: Jan 24 2025, 12:48 PM IST

ಬಿಜೆಪಿ ಅವಧಿಯ ರಾಬರಿ, ಕಳ್ಳತನದ ಪಟ್ಟಿ ಬಹಿರಂಗ ಮಾಡುತ್ತೇನೆ : ಗೃಹ ಸಚಿವ ಡಾ. ಪರಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಡಾ. ಪರಮೇಶ್ವರ್‌ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೇನಾಗಿತ್ತು ಎಂಬ ಮಾಹಿತಿ ನನ್ನ ಬಳಿ ಇದೆ, ಸಮಯ ಬಂದಾಗ ಬಹಿರಂಗ ಮಾಡುತ್ತೇನೆ ಎಂದು ತಿಳಿಸಿದರು.

 ಉಡುಪಿ  : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ಗೃಹಸಚಿವ ಡಾ.ಪರಮೇಶ್ವರ್‌ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೇನಾಗಿತ್ತು ಎಂಬ ಮಾಹಿತಿ ನನ್ನ ಬಳಿ ಇದೆ, ಸಮಯ ಬಂದಾಗ ಬಹಿರಂಗ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಗುರುವಾರ ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇವೆ, ಯಾವುದೇ ದೊಡ್ಡ ಗಲಾಟೆ ಕೋಮು ಗಲಭೆಗಳು ಆಗಿಲ್ಲ, ಕಳ್ಳತನ ದರೋಡೆ ಇವೆಲ್ಲವನ್ನು ಕೂಡ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೇವೆ. ಆದರೆ ಬಿಜೆಪಿ ಆಡಳಿತ ಮಾಡುವಾಗ ಎಷ್ಟು ದರೋಡೆಯಾಗಿತ್ತು? ಎಷ್ಟು ಬ್ಯಾಂಕ್ ರಾಬರಿಯಾಗಿತ್ತು ? ಎಷ್ಟು ಎಟಿಎಂ ಕಳ್ಳತನ ಆಗಿತ್ತು ? ಎಲ್ಲಾ ನನಗೆ ಮಾಹಿತಿ ಇದೆ, ಸಂದರ್ಭ ಬಂದಾಗ ಕೊಡುತ್ತೇನೆ ಎಂದಿದ್ದಾರೆ.

ಮಂಗಳೂರು ಬ್ಯಾಂಕ್ ದರೋಡೆಗೆ ಅಲ್ಲಿನ ಸೆಕ್ಯೂರಿಟಿಯ ಲೋಪವೇ ಕಾರಣ. ಪೊಲೀಸರು ಎರಡೇ ದಿನಗಳಲ್ಲಿ 4 ದರೋಡೆಕೊರರನ್ನು ಬಂಧಿಸಿ 12 ಕೋಟಿ ಬೆಲೆಬಾಳುವ ಚಿನ್ನ ಹಣ ವಶಪಡಿಸಿಕೊಂಡಿದ್ದಾರೆ. ಬೀದರ್ ದರೋಡೆ ಪ್ರಕರಣದಲ್ಲಿಯೂ ಸಾಕಷ್ಟು ಪ್ರಗತಿ ಆಗಿದೆ. ಅಂತಿಮ ಹಂತದಲ್ಲಿ ಇದ್ದೇವೆ ಎಂದರು.

ಫೈನಾನ್ಸ್‌ ಕಿರುಕುಳ: ಮೈಕ್ರೋ ಫೈನಾನ್ಸ್‌ಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಮಾತನಾಡಿದ ಗೃಹಸಚಿವರು, ಈ ಫೈನಾನ್ಸ್‌ನವರು ಸಾಲ ನೀಡಿದ ಹಣ ವಾಪಸ್ ಬರಲಿಲ್ಲ ಅಂದಾಗ ಈ ರೀತಿ ಕೃತ್ಯ ಮಾಡುತ್ತಿದ್ದಾರೆ. ಗ್ರಾಹಕರ ಮೇಲೆ ಒತ್ತಡ ಹೇರುತ್ತಿದ್ದಾರೆ, ದೈಹಿಕ ಹಲ್ಲೆ ಮಾಡಿ ಆಸ್ತಿ ಮುಟ್ಟುಗೋಲು ಮಾಡುತ್ತಿದ್ದಾರೆ. ಆದರೆ ಈ ರೀತಿಯ ಕೃತ್ಯಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ, ದೂರು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಖರ್ಗೆ ಹೇಳಿದ್ದು ತಪ್ಪಾ ?:

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾರು ಯಾರು ತ್ಯಾಗ ಮಾಡುತ್ತಾರೆ ನನಗೆ ಗೊತ್ತಿಲ್ಲ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ ಅವರು ಮಾಡಿದ ತ್ಯಾಗದ ಬಗ್ಗೆ ಸಭೆಯೊಂದರಲ್ಲಿ ಮಾತನಾಡಿದ್ದಾರೆ. ಅವರ ಹೇಳಿಕೆಯಲ್ಲಿ ಏನು ತಪ್ಪಿದೆ ? ಎಂದು ಪತ್ರಕರ್ತರಿಗೆ ಮರು ಪ್ರಶ್ನಿಸಿದರು.

ಬಿಜೆಪಿಗೆಷ್ಟು ಬಾಗಿಲು ?: ಬಿಜೆಪಿಯವರು ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಗುಂಪುಗಳಿವೆ, ನಾಲ್ಕು ಬಾಗಿಲುಗಳಿವೆ, ಒಡೆದು ಹೋಗಿದೆ ಚೂರುಚೂರು ಆಗಿದೆ ಟೀಕಿಸುತ್ತಿದ್ದರು. ಆದರೆ ಈಗ ನಾವು ಕೂಡ ಅವರನ್ನು ಕೇಳಬಹುದಲ್ವಾ ? ಏನಪ್ಪಾ ನಿಮ್ಮ ಬಿಜೆಪಿ ಪಕ್ಷ ಹೇಗಿದೆ ? ಎಷ್ಟು ಚೂರಾಗಿದೆ ? ಬಿಜೆಪಿಯಲ್ಲಿ ಎಷ್ಟು ಬಾಗಿಲುಗಳಿವೆ ಎಂದು ಕೇಳಬಹುದಲ್ವಾ ? ಆದರೆ ಅವರ ಆಂತರಿಕ ವಿಚಾರದ ಬಗ್ಗೆ ನಾನು ಟೀಕೆ ಟಿಪ್ಪಣಿ ಮಾಡಲು ಹೋಗುವುದಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ಬಗ್ಗೆ ಮಾತಾಡಲ್ಲ !

ಬಿಜೆಪಿಯ ಶ್ರೀರಾಮುಲು ಅವರು ಕಾಂಗ್ರೆಸ್ ಸೇರ್ಪಡೆಗೆ ಉಪಮುಖ್ಯಮಂತ್ರಿ ಡಿಕೆಶಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ಯಾವುದೇ ರಾಜಕೀಯ ಹೇಳಿಕೆ ನೀಡವುದಿಲ್ಲ, ಎಐಸಿಸಿ ಅಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ರಾಜಕೀಯ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದಾರೆ, ಬಿಜೆಪಿಯ ಒಳ ಜಗಳಕ್ಕೂ ನಮಗೂ ಸಂಬಂಧ ಇಲ್ಲ. ಅದು ಅವರ ಆಂತರಿಕವಾದ ವಿಚಾರ ಎಂದರು.

ಪಾರ್ಲರ್‌ಗೆ ದಾಳಿ ಮಾಡಿದವರನ್ನು ಬಂಧಿಸಲು ಗೃಹಸಚಿವರ ಸೂಚನೆ

  ಉಡುಪಿ : ಮಂಗಳೂರಿನಲ್ಲಿ ಮಸಾಜ್ ಪಾರ್ಲರಿಗೆ ಯಾವ ಉದ್ದೇಶದಿಂದ ದಾಳಿ ಮಾಡಿದ್ದಾರೋ ಗೊತ್ತಿಲ್ಲ, ದಾಳಿ ಮಾಡಿದವರನ್ನು ತಕ್ಷಣ ಬಂಧಿಸಲು ಸೂಚಿಸಿದ್ದೇನೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು, ಪ್ರತಿಯೊಬ್ಬರಿಗೂ ಕೆಲಸ ಮಾಡಿ ಬದುಕುವ ಹಕ್ಕಿದೆ. ವ್ಯಾಪಾರ ಮಾಡುವವರಿಗೆ ಕಾರ್ಪೊರೇಷನ್ ಅವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ, ಆಗ ಯಾವ ಷರತ್ತು ಹಾಕಿ ಕೊಟ್ಟಿರುತ್ತಾರೆ ಅದನ್ನು ಪಾಲಿಸದಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ.

ಈ ಪಾರ್ಲರ್‌ನಲ್ಲಿ ಅನೈತಿಕ ಕಾರ್ಯ ನಡೆಯುತ್ತಿದ್ದರೆ ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತಾರೆ, ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಇಂತಹ ಕೃತ್ಯಗಳು ನಡೆಯಬಾರದು, ಆದ್ದರಿಂದ ಕಾನೂನು ಪ್ರಕಾರ ದಾಳಿನಡೆಸಿದವರನ್ನು ತಕ್ಷಣ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.