ಕನ್ನಡಪ್ರಭ ವಾರ್ತೆ ಹುನಗುಂದ

ನಾಡಿನ ಹರ ಗುರು ಚರಮೂರ್ತಿಗಳ, ಜತೆಗೆ ಪಕ್ಷದ ಹೈಕಮಾಂಡ್‌ ನಾಯಕರು, ಸರ್ವ ಸಮುದಾಯದ ಜನಾಶೀರ್ವಾದದಿಂದ ಇಂದು ನನಗೆ ಮಂತ್ರಿ ಪದವಿ ದೊರೆತಿದೆ. ಇದನ್ನು ಅಧಿಕಾರ ಎಂದು ಭಾವಿಸದೆ ಸೇವೆ ಎಂದು ಭಾವಿಸಿದ್ದೇನೆ ಎಂದು ನೂತನ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಸಚಿವರಾಗಿ ಪ್ರಥಮ ಬಾರಿಗೆ ಅವರ ಸ್ವಗ್ರಾಮ ಹುನಗುಂದ ತಾಲೂಕಿನ ಹಾವರಗಿ ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ವಿಜಯಾನಂದ ಕಾಶಪ್ಪನವರ ಅವರನ್ನು ಅಗಸಿ ಬಾಗಿಲಲ್ಲಿ ಮಹಿಳೆಯರು ಆರತಿ ಬೆಳಗಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರ ಗೌರವ ಸ್ವೀರಿಸಿದ ನಂತರ ಸಚಿವರು ಮಾತನಾಡಿದರು. ನಮ್ಮ ತಂದೆ ರಾಜಕೀಯದಲ್ಲಿದ್ದುಕೊಂಡು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕಷ್ಟ ಎಂದು ಬಂದವರಿಗೆ ಕೈಚಾಚಿದ್ದಾರೆ. ಅವರಿಗೆ ಈ ಕ್ಷೇತ್ರದ ಅಷ್ಟೊಂದು ಶಕ್ತಿಯನ್ನು ನೀಡಿದ್ದರು. ಅದರಂತೆಯೇ ಈಗ ಕಾಶಪ್ಪನವರ ಕುಟುಂಬಕ್ಕೆ ಈ ಕ್ಷೇತ್ರದ ಜನರು ಎಂದಿಗೂ ಕೈಬಿಟ್ಟಿಲ್ಲ. ಮತ್ತಷ್ಟು ಶಕ್ತಿಯನ್ನು ತುಂಬಿದ್ದಾರೆ. ಈಗ ಅವರ ಸೇವೆ ಮಾಡುವ ಅವಕಾಶ ದೇವರು ನನಗೆ ಒದಗಿಸಿದ್ದಾನೆ ಎಂದು ಭಾವನಾತ್ಮಕವಾಗಿ ನುಡಿದರು.

ಈಗ ರಾಜಕೀಯಕ್ಕಿಂತ ಅಭಿವೃದ್ಧಿಯೇ ದೊಡ್ಡದು. ಬರಗಾಲದಂತ ಪರಿಸ್ಥಿತಿ ಈ ಸಂದರ್ಭದಲ್ಲಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಈಗ ರೈತರ ಪರವಾಗಿ ಸರ್ಕಾರ ನಿಲ್ಲಲಿದೆ. ಅವರು ಎಂದಿಗೂ ಎದೆಗುಂದಬಾರದು ಎಂದು ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು. ಇದೆ ವೇಳೆ ಗ್ರಾಮದಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದ ಒಡನಾಟವನ್ನು ಸಚಿವರು ಸ್ಮರಿಸಿದರು.

ವಿಜಯಾನಂದ ಕಾಶಪ್ಪನವರ ಸಚಿವರಾಗಲು ನಾಲಾಯಕ್ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಶಾಸಕರೊಬ್ಬರ ಮಾತಿಗೆ ವೇದಿಕೆಯಲ್ಲಿಯೇ ತಿರುಗೇಟು ನೀಡಿದ ಅವರು, ಅವರು ಶಾಸಕರಾಗಲು ಕೂಡ ನಾಲಾಯಕ್ ಎಂದು ಜನತೆ ಕಳೆದ ಚುನಾವಣೆಯಲ್ಲಿ ತೀರ್ಪು ನೀಡಿದ್ದಾರೆ. ಮೂರು ಅವಧಿ ಶಾಸಕರಾಗಿದ್ದರೂ ಒಂದು ನಿಗಮದ ಸದಸ್ಯರಾಗಲು ಕೂಡ ನಾಲಾಯಕ್ ಆಗಿದ್ದವರು ಯಾರು ಎಂದು ಅವರೇ ಪ್ರಶ್ನಿಸಿಕೊಳ್ಳಬೇಕು. ಸಚಿವರಾಗಿರುವ ನನಗೆ ಆಪ್ತ ಸಹಾಯಕರಾಗಲು ಕೂಡ ಅವರು ಅನರ್ಹರು ಎಂದು ತಿರುಗೇಟು ನೀಡಿದರು.


ಸಮಾಜದ ಜಗದ್ಗುರುಗಳು ತಾವು ತೊಟ್ಟ ಖಾದಿಗೆ ವಿಧೇಯರಾಗಿರಬೇಕು. ನಾವು ರಾಜಕೀಯ ಬಟ್ಟೆಗೆ ವಿಧೇಯರಾಗಿದ್ದೇವೆ ಎಂದು ಕಿವಿಮಾತು ಹೇಳಿದ ಸಚಿವ ವಿಜಯಾನಂದ, ಮುಖ್ಯಮಂತ್ರಿಗಳ ಮುಂದೆ ನನ್ನನ್ನು ಸಚಿವರನ್ನಾಗಿ ಮಾಡಬೇಡಿ ಎಂದು ಹೇಳಿದ್ದರು. ಆದರೆ, ಮುಖ್ಯಮಂತ್ರಿಗಳು ನನ್ನನ್ನು ಕರೆದು ಸಚಿವರನ್ನಾಗಿ ಮಾಡಿದ್ದಾರೆ. ಈ ಮೂಲಕ ಕೇಡು ಬಯಸುವವರು ನೂರು ಜನರಿದ್ದರೆ ಒಳಿತನ್ನು ಮಾಡಲು ದೇವರಿದ್ದಾನೆ ಎಂದು ಸೂಕ್ಷ್ಮವಾಗಿ ತಿರುಗೇಟು ನೀಡಿದರು.

ಕಾರ್ಯಕ್ರಮದಲ್ಲಿ ಮಹಾಲಿಂಗಪ್ಪ ಕಾಶಪ್ಪನವರ, ಶರಣಮ್ಮ ಕಾಶಪ್ಪನವರ, ದೇವಾನಂದ ಕಾಶಪ್ಪನವರ, ಮಹಾಂತೇಶ ನರಗುಂದ, ನಾಗಪ್ಪ ಅಂಬಿಗೇರ, ಮಹಾಂತೇಶ ಕಾಶಪ್ಪನವರ, ವಿಜಯ ಗದ್ದನಕೇರಿ, ಮುತ್ತಣ್ಣ ಕಲಗೋಡಿ, ಖಾಜೇಸಾಬ್ ಮುದಗಲ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಬಸವರಾಜ ಸಿಂಧೂರ ಸುಭಾಷ್ ಕೊಪ್ಪದ, ಬಸವರಾಜ ಶಿರೂರ, ಹಾಗೂ ಇತರರು ಉಪಸ್ಥಿತರಿದ್ದರು.

ನೂತನ ಸಚಿವರಿಗೆ ಅದ್ಧೂರಿ ಸ್ವಾಗತ: ನೂತನ ಸಚಿವರಾಗಿ ಮೊದಲ ಬಾರಿಗೆ ಹಾವರಗಿ ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ವಿಜಯಾನಂದ ಕಾಶಪ್ಪನವರ ಅವರನ್ನು ಅಗಸಿ ಬಾಗಿಲಲ್ಲಿ ಮಹಿಳೆಯರು ಆರತಿ ಬೆಳಗಿ ಅದ್ಧೂರಿಯಾಗಿ ಸ್ವಾಗತಿಸಿದರು. ಮಾತ್ರವಲ್ಲ, ಡೊಳ್ಳು ಕುಣಿತದೊಂದಿಗೆ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಾಲಾ ವಿದ್ಯಾರ್ಥಿಗಳು ಬ್ಯಾಂಡ್‌ನೊಂದಿಗೆ ಪುಷ್ಪ ವೃಷ್ಟಿ ಮಾಡುವ ಮೂಲಕ ನೂತನ ಸಚಿವರನ್ನು ಮನಪೂರ್ವಕವಾಗಿ ಸ್ವಾಗತಿಸಿದರು.

ಇದೆ ವೇಳೆ ಗ್ರಾಮದಲ್ಲಿರುವ ತಮ್ಮ ತಂದೆ (ಮಾಜಿ ಸಚಿವ) ಎಸ್.ಆರ್.ಕಾಶಪ್ಪನವರ ಅವರ ಪುತ್ಥಳಿಗೆ ಕುಟುಂಬ ಸಮೇತರಾಗಿ ಬಂದು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೌರಮ್ಮ ಕಾಶಪ್ಪನವರ ಅವರು ಕೂಡ ಎಸ್.ಆರ್ ಕಾಶಪ್ಪನವರ ಪುತ್ಥಳಿ ನೋಡಿ ಕಣ್ಣೀರು ಸುರಿಸಿದ್ದು, ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.