ಕರಡಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ: ಡಾ. ಬಸವರಾಜ

| Published : Mar 21 2024, 01:04 AM IST

ಕರಡಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ: ಡಾ. ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಕರಡಿ ಸಂಗಣ್ಣರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆ ಎದುರಿಸಲಾಗುವುದು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಸಂಸದ ಕರಡಿ ಸಂಗಣ್ಣರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆ ಎದುರಿಸಲಾಗುವುದು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ಹೇಳಿದರು.

ಪಟ್ಟಣದ ಬಿಜೆಪಿಯ ಅಂಜನಾದ್ರಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಡಿ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ. ನಮ್ಮ ಜೊತೆಯೇ ಇದ್ದು ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸಗಳಿಂದ ಕೊಪ್ಪಳದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದರು ಅಸಮಾಧಾನಗೊಂಡಿರುವುದು ನಮಗೂ ಕೂಡ ಬೇಸರ ತಂದಿದೆ. ಕಳೆದ ಚುನಾವಣೆಯಲ್ಲಿ ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೆ. ಹಿರಿಯರ ಹಾಗೂ ಮುಖಂಡರ ಸಲಹೆಯಂತೆ ನಾನು ಸಂಗಣ್ಣರ ಗೆಲುವಿಗೆ ಶ್ರಮಿಸಿದ್ದೇನೆ. ಕ್ಷೇತ್ರದಾದ್ಯಂತ ಪ್ರಚಾರ ಮಾಡಿ ನಮ್ಮ ತಂದೆ ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಸೇರಿದಂತೆ ಕಾರ್ಯಕರ್ತರೊಂದಿಗೆ ಕೆಲಸ ಮಾಡಿ ಎರಡು ಬಾರಿ ಸಂಸದರಾಗಿ ಮಾಡಿದ್ದೇವೆ ಎಂದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಅಸಮಾಧಾನಗೊಂಡಿರುವ ಸಂಗಣ್ಣರಿಗೆ ಪಕ್ಷ ಎಲ್ಲವನ್ನು ನೀಡಿದೆ. ಟಿಕೆಟ್‌ ಸಿಗದಿದ್ದಕ್ಕೆ ಅವರು ಬೇರೆ ಪಕ್ಷದಿಂದ ಅಥವಾ ಬಂಡಾಯವಾಗಿ ಸ್ಪರ್ಧೆ ಮಾಡಿದರೆ ನಮಗೆ ಯಾವುದೇ ನಷ್ಟವಿಲ್ಲ. ಅಭ್ಯರ್ಥಿಯ ಬದಲಾವಣೆಯ ಮಾತು ಸಹ ಇಲ್ಲಿ ಬರುವುದಿಲ್ಲ. ಹೈಕಮಾಂಡ್ ಒಮ್ಮೆ ನಿರ್ಧಾರ ಮಾಡಿದರೆ ವಾಪಸ್‌ ಹಿಂತೆಗೆದುಕೊಂಡಿರುವ ಉದಾಹರಣೆಗಳೆ ಇಲ್ಲ. ಸಂಸದರಿಗೆ ಇರುವ ಅಸಮಾಧಾನವನ್ನು ಹಿರಿಯ ನಾಯಕರು ಬಗೆಹರಿಸಲಿದ್ದಾರೆ, ಏನಾಗುತ್ತದೆ ಎಂದು ಕಾಯ್ದು ನೋಡಬೇಕು ಎಂದರು.

ಲೋಕಸಭಾ ಕ್ಷೇತ್ರದ ಚುನಾವಣೆ ನಿರ್ವಹಣಾ ಸಭೆ:

ಕುಷ್ಟಗಿ ಪಟ್ಟಣದ ಬಿಜೆಪಿಯ ಕಚೇರಿಯ ಸಭಾಂಗಣದಲ್ಲಿ ಲೋಕಸಭಾ ಕ್ಷೇತ್ರದ ಚುನಾವಣೆ ನಿರ್ವಹಣಾ ಸಭೆ ನಡೆಯಿತು.

ಕೊಪ್ಪಳ ಲೋಕಸಭಾ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ. ಕೆ. ಬಸವರಾಜ ಮಾತನಾಡಿ, ನರೇಂದ್ರ ಮೋದಿಯವರ ಸಾಧನೆ ನೋಡಿಕೊಂಡು ಜನರು ನನಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಸಮಪರ್ಕವಾಗಿ ಕೆಲಸ ಬಿಜೆಪಿ ಗೆಲ್ಲಿಸಬೇಕು ಎಂದರು.ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ನಾಯಕರಾದ ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಶಾಸಕರಾದ ಶಿವರಾಜಗೌಡ ಪಾಟೀಲ, ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗುರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಪ್ರಮುಖರಾದ ಕೆ.ವಿರುಪಾಕ್ಷಪ್ಪನವರು, ಸೋಮಲಿಂಗಪ್ಪ, ಪ್ರತಾಪಗೌಡ ಮಸ್ಕಿ, ಕೆ. ಕರಿಯಪ್ಪ, ಚನ್ನಬಸನಗೌಡ, ಪ್ರಭಾರಿಗಳಾದ ಚಂದ್ರಶೇಖರ ಪಾಟೀಲ ಹಲಗೇರಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹಾಗೂ ಪಕ್ಷದ ಪದಾಧಿಕಾರಿಗಳು, ಕೊಪ್ಪಳ ಲೋಕಸಭೆಯ ಎಂಟು ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಇದ್ದರು.ಪೋಟೊ20ಕೆಎಸಟಿ6: ಸಭೆಯಲ್ಲಿ ಬಿಜೆಪಿಯ ನಿಯೋಜಿತ ಅಭ್ಯರ್ಥಿ ಡಾ. ಕೆ. ಬಸವರಾಜ ಮಾತನಾಡಿದರು.