ಸಾರಾಂಶ
ಶಿವಮೊಗ್ಗ : ಬಿಜೆಪಿಯಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಅದಕ್ಕಾಗಿ ನಿಮಗೆ ಬೆಂಬಲ ಕೊಡುತ್ತೇವೆ ಎಂದು ಆಯಾ ಸಮಾಜದ ಮುಖಂಡರು ಬರುತ್ತಿದ್ದಾರೆ. ಈ ಹಿನ್ನೆಲೆ ನೂರಕ್ಕೆ ನೂರು ಗೆದ್ದು ಬರುತ್ತೇನೆ ಎಂಬ ವಿಶ್ವಾಸ ಹೆಚ್ಚಿಸಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ನಗರದ ಮಿಳಘಟ್ಟದಲ್ಲಿ ಮರಾಠ ಸಮಾಜದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಈಶ್ವರಪ್ಪ ಪರ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ನನ್ನ ಅಧಿಕಾರ ಅವಧಿಯಲ್ಲಿ ಮರಾಠ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದ್ದೇನೆ. ಅದು ನನ್ನ ಕರ್ತವ್ಯ. ಪಕ್ಷ ಶುದ್ಧೀಕರಣ ಮಾಡುವ ಕೆಲಸಕ್ಕೆ ರಾಜ್ಯಾದ್ಯಂತ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದರು.
ಹಿಂದಿನಿಂದಲೂ ಮರಾಠ ಸಮಾಜ ನಮ್ಮ ಜೊತೆ ಇದೆ. ಜಿಲ್ಲೆಯಲ್ಲಿ ಮರಾಠ ಸಮಾಜ ದೊಡ್ಡದಿದೆ. ನಾಮಪತ್ರ ಸಲ್ಲಿಕೆ ಬಳಿಕ ಸಮಾಜದ ಮುಖಂಡರು ತಾಲೂಕು, ಜಿಲ್ಲಾದ್ಯಂತ ಪ್ರವಾಸ ಮಾಡಿ ನನ್ನ ಪರ ಪ್ರಚಾರ ಮಾಡಬೇಕಿದೆ. ಇದಕ್ಕೆ ನಿಮ್ಮ ಸಹಕಾರ ಅಗತ್ಯವಾಗಿದೆ. ನಮ್ಮ ಜೊತೆ ಬಾಹ್ಮಣ, ದೈವಜ್ಞ, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ಸಮಾಜದವರು ನಮ್ಮೊಟ್ಟಿಗೆ ಇದ್ದಾರೆ. ಇದೇ ವಿಶ್ವಾಸದಲ್ಲೇ ನಾನು ಗೆಲ್ಲುತ್ತೇನೆ ಎಂದರು.
ಸಭೆಯಲ್ಲಿ ಸಮಾಜದ ಅಧ್ಯಕ್ಷ ಶಿವಾಜಿರಾವ್ ಘಾಡ್ಕೆ , ಪ್ರಮುಖರಾದ ರಮೇಶ್ ಬಾಬು, ಚೂಡಾಮಣಿ, ದಿನೇಶ್, ರಘು ಪವಾರ್, ಬಲರಾಮ್, ರಮೇಶ್ ಘಾಡ್ಕೆ ಸೇರಿದಂತೆ ಮತ್ತಿತರರು ಇದ್ದರು.