ಕುಳುವ ಸಮಾಜದ ಏಳಿಗೆಗಾಗಿ ಶ್ರಮಿಸುವೆ: ಸಂತೋಷ್ ಲಾಡ್

| Published : Aug 25 2025, 01:00 AM IST

ಕುಳುವ ಸಮಾಜದ ಏಳಿಗೆಗಾಗಿ ಶ್ರಮಿಸುವೆ: ಸಂತೋಷ್ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಕುಳುವ ಸಮಾಜದವರಿಗೆ ತಮ್ಮ ಸಮಾಜಕ್ಕೆ ಒಬ್ಬ ಸ್ವಾಮೀಜಿ ಇಲ್ಲವೆಂಬ ಕೊರಗಿದೆ. ಸಮಾಜದವರು ಒಪ್ಪಿ, ಸೂಚಿಸುವವರನ್ನು ಸಮಾಜದ ಸ್ವಾಮೀಜಿಯನ್ನಾಗಿ ಮಾಡಲಾಗುವುದು.

ಶರಣ ನುಲಿಯ ಚಂದಯ್ಯನವರ ೯೧೮ನೇ ಜಯಂತ್ಯುತ್ಸವ

ಕನ್ನಡಪ್ರಭ ವಾರ್ತೆ ಸಂಡೂರು

ಹಿಂದುಳಿದಿರುವ ಕುಳುವ ಸಮಾಜದ ಏಳಿಗೆಗಾಗಿ ಪ್ರಮಾಣಿಕವಾಗಿ ಶ್ರಮಿಸುವೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ತಿಳಿಸಿದರು.

ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಕೊರಮ, ಕೊರಚ ಹಾಗೂ ಕೊರವ ಸಮುದಾಯಗಳ ಒಕ್ಕೂಟವಾದ ಅಖಿಲ ಕರ್ನಾಟಕದ ಕುಳುವ ಮಹಾಸಂಘದ ತಾಲೂಕು ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶರಣ ನುಲಿಯ ಚಂದಯ್ಯನವರ ೯೧೮ನೇ ಜಯಂತ್ಯುತ್ವವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೂಚಿಸುವವರನ್ನು ಸ್ವಾಮೀಜಿಯನ್ನಾಗಿ ಮಾಡಲು ಸಹಕರಿಸುವೆ:

ಕುಳುವ ಸಮಾಜದವರಿಗೆ ತಮ್ಮ ಸಮಾಜಕ್ಕೆ ಒಬ್ಬ ಸ್ವಾಮೀಜಿ ಇಲ್ಲವೆಂಬ ಕೊರಗಿದೆ. ಸಮಾಜದವರು ಒಪ್ಪಿ, ಸೂಚಿಸುವವರನ್ನು ಸಮಾಜದ ಸ್ವಾಮೀಜಿಯನ್ನಾಗಿ ಮಾಡಲಾಗುವುದು. ಸಮಾಜದ ಮಠಕ್ಕೆ ಬೇಕಾಗುವ ಜಾಗ ಖರೀದಿಗೆ ಸಹಕರಿಸಲಾಗುವುದು. ಪಟ್ಟಣದಲ್ಲಿ ಕುಳುವ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಿ ಕೊಡಲಾಗುವುದು ಎಂದರು.

ಐಎಎಸ್, ಐಪಿಎಸ್ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಸಮಾಜದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಕೊಡಿಸಲಾಗುವುದು. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ಕೊಡಿಸುವ ಮೂಲಕ ಕೆಲಸವನ್ನು ಕೊಡಿಸಲು ಪ್ರಯಾಣಿಕವಾಗಿ ಪ್ರಯತ್ನಿಸುವೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಕಿರಣಕುಮಾರ್ ಕೊತ್ತಗೆರೆ, ಕುಳುವ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ರಾಜ್ಯದಲ್ಲಿ ಸುಮಾರು ೭ ಲಕ್ಷ ಜನಸಂಖ್ಯೆ ಹೊಂದಿರುವ ಈ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಈ ಸಮಾಜದ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ ಗುಂಪಿನಲ್ಲಿರುವ ೧೦೧ ಜಾತಿಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕಿದೆ ಎಂದರು.

ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಮಾತನಾಡಿ, ಈ ನೆಲದ ಮೂಲ ನಿವಾಸಿಗಳಿಗೆ ಶಾಶ್ವತ ನೆಲೆ ಇಲ್ಲ. ಅಲೆಮಾರಿಗಳಿಗೆ ನಿಜವಾದ ಸ್ವಾತಂತ್ರ್ಯ ದೊರಕಿದ್ದು ೧೯೫೨ರಲ್ಲಿ. ರಾಜ್ಯದಲ್ಲಿ ಅಲೆಮಾರಿಗಳಿಗೆ ಮೀಸಲಾತಿ ಅಗತ್ಯವಿದೆ. ಅವರಿಗೆ ಶಿಕ್ಷಣ, ಶಾಶ್ವತ ನೆಲೆ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅವರ ಏಳ್ಗೆಗಾಗಿ ಶಾಶ್ವತ ಅಲೆಮಾರಿ ಆಯೋಗ ಸ್ಥಾಪನೆಯಾಗಬೇಕಿದೆ ಎಂದು ನುಡಿದರು.

ಸಂಸದ ಈ. ತುಕಾರಾಂ, ಶಾಸಕಿ ಈ. ಅನ್ನಪೂರ್ಣ ತುಕಾರಾಂ, ಮಾಜಿ ಶಾಸಕ ಭೀಮಾನಾಯ್ಕ್, ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಸಮಿತಿ ಅಧ್ಯಕ್ಷ ಶಿವಾನಂದ ಎಂ. ಭಜಂತ್ರಿ, ಗೌರವಾಧ್ಯಕ್ಷ ಜಿ. ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಆನಂದ್ ಕುಮಾರ್ ಏಕಲವ್ಯ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಪ್ರಭು ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ ಹಾಗೂ ಪಟ್ಟದ ಚಿನ್ಮಯ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಶರಣ ನುಲಿಯ ಚಂದಯ್ಯನವರ ಕಾಯಕ ಹಾಗು ದಾಸೋಹ ಸೇವೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಕುಳುವ ಮಹಾಸಂಘದ ತಾಲೂಕು ಸಮಿತಿ ಅಧ್ಯಕ್ಷ ಕೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಉಪಾಧ್ಯಕ್ಷೆ ಎಂ.ಸಿ. ಲತಾ, ಕುಳುವ ಮಹಾಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಡಾ.ಕೆ. ಹನುಮಂತಪ್ಪ, ಖಜಾಂಚಿ ರಮಣಪ್ಪ ಭಜಂತ್ರಿ, ಜಿಲ್ಲಾಧ್ಯಕ್ಷ ಶಂಕರಬಂಡೆ ವೆಂಕಟೇಶ, ಉಪಾಧ್ಯಕ್ಷ ಕೆ. ಈರಣ್ಣ, ರಾಜ್ಯ ಸಮಿತಿ ಅಧಿಕ ಕಾರ್ಯದರ್ಶಿ ಡಾ.ಎಲ್. ಗಂಗಾಧರ, ತಾಲೂಕು ಸಮಿತಿ ಉಪಾಧ್ಯಕ್ಷರಾದ ಕೆ. ರಾಮಾಂಜಿನಿ, ಕೆ. ಪಂಪಾಪತಿ, ಪ್ರಧಾನ ಕಾರ್ಯದರ್ಶಿ ಕೆ. ಶೇಖಪ್ಪ, ಸಹ ಕಾರ್ಯದರ್ಶಿಗಳಾದ ಕೆ. ಜಂಬಯ್ಯ, ತೆಲಿಗೆ ಮಂಜಪ್ಪ, ಖಜಾಂಚಿಗಳಾದ ಕೆ. ಪರಸಪ್ಪ, ಕೆ. ಹುಲಿಗೆಪ್ಪ, ಸದಸ್ಯರಾದ ಕೆ. ನಾಗರಾಜ, ಕೆ. ಹುನುಮಂತ, ಕೆ. ರಾಮು, ಜಡೆಪ್ಪ, ಪಿ.ಕೆ. ನಾಗರಾಜ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶರಣ ನುಲಿಯ ಚಂದಯ್ಯನವರ ಭಾವಚಿತ್ರವನ್ನು ಕುಂಭ ಕಳಸಾರತಿ, ವಾದ್ಯಮೇಳಗಳೊಂದಿಗೆ ಭವ್ಯವಾಗಿ ಮೆರವಣಿಗೆ ಮಾಡಲಾಯಿತು.