ಕುಂದಗೋಳ: ನಾನು ಕೇವಲ ವೇದಿಕೆಗಳ ಮೇಲೆ ಬಣ್ಣ ಬಣ್ಣದ ಮಾತುಗಳನ್ನಾಡಿ ಜಾದು ಮಾಡುವವನಲ್ಲ. ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ ಭರವಸೆಯಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು
ತಾಲೂಕಿನ ಕುಬಿಹಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅಂದಾಜು ₹14 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಪ್ರತಿ ವರ್ಷವೂ ಬೆಣಿಹಳ್ಳದ ಪ್ರವಾಹದಿಂದ ಈ ಭಾಗದ ರೈತರಿಗೆ ಮತ್ತು ಅವರ ಜಮೀನುಗಳಿಗೆ ಸಾಕಷ್ಟು ಹಾನಿ ಉಂಟಾಗುತ್ತಿರುವುದು ಗಮನಕ್ಕೆ ಬಂದಿತ್ತು. ಈ ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣವೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೆ ತಂದಾಗ, ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಕೇಂದ್ರ ಸರ್ಕಾರದಿಂದ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಮಂಜೂರಾದ ಈ ಅನುದಾನದಿಂದ ನಿರ್ಮಾಣವಾಗುತ್ತಿರುವ ಚೆಕ್ ಡ್ಯಾಂ ಮತ್ತು ಬಾಂದಾರಗಳು ರೈತರ ಪಾಲಿಗೆ ವರದಾನವಾಗಲಿವೆ. ಈ ಕಾಮಗಾರಿಗಳಿಂದ ಕೇವಲ ಪ್ರವಾಹ ನಿಯಂತ್ರಣ ಮಾತ್ರವಲ್ಲದೆ, ಅಂತರ್ಜಲ ಮಟ್ಟವೂ ವೃದ್ಧಿಯಾಗಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಕುಬಿಹಾಳ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ, ಬೆಣ್ಣಿ-ಮಸ್ತಿ ಹಳ್ಳಕ್ಕೆ ಅಡ್ಡಲಾಗಿ ಬಾಂದಾರ ಸೈಟ್-1 ಮತ್ತು ಸೈಟ್-2 ನಿರ್ಮಾಣ, ಬೆಣ್ಣಿ ಹಳ್ಳಕ್ಕೆ ಅಡ್ಡಲಾಗಿ ಬಿ.ಸಿ.ಬಿ. ಸೈಟ್-2 ಮತ್ತು ಸೈಟ್-3 ನಿರ್ಮಾಣ ಹಾಗೂ ವಿಟ್ಲಾಪುರ ಗುರುವಿನಹಳ್ಳಿ ಗ್ರಾಮದ ಹತ್ತಿರ ಬಿ.ಸಿ.ಬಿ ನಿರ್ಮಾಣ ಸೇರಿದಂತೆ ಅಂದಾಜು ₹13 ಕೋಟಿ ವೆಚ್ಚದ ಬೃಹತ್ ಮೊತ್ತದ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ನಾಗನಗೌಡ ಸಾತ್ಮಾರ, ಮಾಲತೇಶ್ ಶ್ಯಾಗೋಟಿ, ಶಂಕರಗೌಡ ಮುದಿಗೌಡ್ರ, ಬಸವರಾಜ ದೇಶಪಾಂಡೆ, ಉಮೇಶ್ ಹೆಬಸೂರ, ರಾಮಣ್ಣ ಇಂಗಳಹಳ್ಳಿ, ಬಸಪ್ಪ ಗುಡಿಗೇರಿ, ರಮೇಶ ಸುಂಕದ್, ಮಂಜುನಾಥ ಬೂದಪ್ಪನವರ್, ಉಮೇಶ್ ಇಂಗಳಗಿ, ಪರಸಪ್ಪ ಮಾಡಲಗಿ, ಪಿಡಿಒ ಬಸವರಾಜ ಬಾಗಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.