ಭಾರತದ ಮಹಿಳೆ ಶ್ರದ್ಧಾ ಕೇಂದ್ರದ ಪ್ರತೀಕ: ಸಿ.ಆರ್.ನರೇಂದ್ರ

| Published : Dec 17 2024, 01:01 AM IST

ಭಾರತದ ಮಹಿಳೆ ಶ್ರದ್ಧಾ ಕೇಂದ್ರದ ಪ್ರತೀಕ: ಸಿ.ಆರ್.ನರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಹೊರಜಗತ್ತಿನಲ್ಲಿ ಅಲಂಕಾರ, ಭೋಗದ ವಸ್ತು ರೀತಿಯಲ್ಲಿ ಬಿಂಬಿಸಲಾಗುತ್ತದೆ. ಆದರೆ ಭಾರತದಲ್ಲಿ ಶ್ರದ್ಧಾ ಕೇಂದ್ರವಾಗಿ ಮಹಿಳೆ ಕಾಣಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ಮೂಲದಲ್ಲಿ ಮಾತೃ ಪ್ರಧಾನ ರಾಷ್ಟ್ರವಾಗಿದ್ದು, ಮಾತೆಯರು ಬಿತ್ತಿದ ಸಂಸ್ಕಾರದ ಬೀಜದಿಂದಾಗಿಯೇ ಇಲ್ಲಿ ವೀರಪುರುಷರು ಜನ್ಮತಾಳಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರಕ ಸಿ.ಆರ್.ನರೇಂದ್ರ ಬಣ್ಣಿಸಿದರು.

ಬಿವಿವಿ ಸಂಘದ ಆಟದ ಮೈದಾನದಲ್ಲಿ ಸೇವಾ ಭಾರತಿ ಟ್ರಸ್ಟ್ ರಜತ ಮಹೋತ್ಸವದ ಪ್ರಯುಕ್ತ 2 ದಿನಗಳ ಕಾಲ ನಡೆದ ಕಿಶೋರಿ ಸಂಗಮ ಕಾರ್ಯಕ್ರಮದ ಸಮಾರೋಪದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ದೇಶ, ಧರ್ಮದ ವಿಚಾರದಲ್ಲಿ ಹೋರಾಡಿದ ಯಾವುದೇ ಮಹಾನ್‌ ಪುರುಷರ ಜೀವನಗಾಥೆ ಓದಿದಾಗ ಅವರ ಸಾಧನೆಗೆ ತಾಯಂದಿರ ಪ್ರೇರಣೆ ಇರುವುದು ಕಂಡು ಬರುತ್ತದೆ. ಹೆಣ್ಣು ಹೊರಜಗತ್ತಿನಲ್ಲಿ ಅಲಂಕಾರ, ಭೋಗದ ವಸ್ತು ರೀತಿಯಲ್ಲಿ ಬಿಂಬಿಸಲಾಗುತ್ತದೆ. ಆದರೆ ಭಾರತದಲ್ಲಿ ಶ್ರದ್ಧಾ ಕೇಂದ್ರವಾಗಿ ಮಹಿಳೆ ಕಾಣಲಾಗುತ್ತದೆ. ಇದು ಈ ಮಣ್ಣಿನ ಶ್ರೀಮಂತಿಕೆ ಎಂದರು. ಪುರುಷ ಶಕ್ತಿ ಮುಂದೆ ಮಹಿಳೆ ದುರ್ಬಲ ಎಂದು ಬಿಂಬಿಸಲಾಗಿತ್ತು. ಭಾರತದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಅಹಲ್ಯಬಾಯಿ ಹೋಳ್ಕರ್, ಝಾನ್ಸಿ ರಾಣಿ ಲಕ್ಷ್ಮೀ ರಾಣಿ ಸೇರಿದಂತೆ ಅನೇಕ ವೀರಮಹಿಳೆಯರು ಅದನ್ನು ಸುಳ್ಳಾಗಿಸಿ ಮಹಿಳಾ ಶಕ್ತಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆಂದರು.

ಕಿಶೋರಿಯರು ಭಾರತದ ಭವಿಷ್ಯ. ಅವರು ಉತ್ತಮ ಸಂಸ್ಕಾರ ಹೊಂದಿದರೆ ಭಾರತೀಯ ಸಮಾಜವೂ ಸಂಸ್ಕಾರವಂತವಾಗಿ ಬೆಳೆಯುತ್ತದೆ. ಆಧುನಿಕ ಭರಾಟೆಯಲ್ಲಿ ಆಚರಣೆ, ಸಂಸ್ಕೃತಿಯನ್ನು ಯುವ ಪೀಳಿಗೆ ಬಿಡಬಾರದು. ಪ್ರತಿ ಮನೆಯಲ್ಲಿ ಭಾರತೀಯ ಸಂಸ್ಕೃತಿ ಆಚರಣೆಗಳು ಮುನ್ನೆಲೆಗೆ ಬರಬೇಕು. ಸೇವಾ ಭಾರತಿ ಟ್ರಸ್ಟ್ ಸಮಾಜದಲ್ಲಿ ಅಗತ್ಯವಿರುವ ಕಡೆ ಸಂಸ್ಕಾರ ಹಾಗೂ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಜನ್ಮತಾಳಿದೆ. ಎರಡು ದಿನಗಳ ಕಿಶೋರಿ ಸಂಗಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಲಕಿಯರು ಪಾಲ್ಗೊಂಡಿದ್ದೀರಿ. ಭಾಷಣ, ಗೋಷ್ಠಿಗಳು ಎಲ್ಲವೂ ಆಗಿದೆ. ಇನ್ನು ಆಚರಣೆಗೆ ತರುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಹೇಳಿದರು.

ಸೇವಾ ಭಾರತಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಶ್ರೀಧರ ನಾಡಿಗೇರ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ಹಿಂದುಳಿದ ಪ್ರದೇಶಗಳಲ್ಲಿ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ಒದಗಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲಪು ಧ್ಯೇಯೋದ್ದೇಶದೊಂದಿಗೆ ಆರಂಭಗೊಂಡ ಟ್ರಸ್ಟ್ ಯಶಸ್ಸು ಕಂಡಿದೆ ಎಂದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ರಜತ ಮಹೋತ್ಸವದ ಪ್ರಯುಕ್ತ 2 ದಿನಗಳ ಕಾಲ ಅರ್ಥಪೂರ್ಣ ಕಾರ್ಯಕ್ರಮ ಜರುಗಿದೆ. ಬಿವಿವಿ ಸಂಘದಲ್ಲಿ ಇಂಥದೊಂದು ಕಾರ್ಯಕ್ರಮ ಜರುಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಸದ ಗೋವಿಂದ ಕಾರಜೋಳ, ಟ್ರಸ್ಟ್ ಅಧ್ಯಕ್ಷ ಬಾಬುರಾವ್ ಘಂಟಸಾಲ, ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ರಘು ಅಕಮಂಚಿ, ಹುಬ್ಬಳ್ಳಿ ಜಾಗೃತಿ ಸೇವಾ ಸ್ವಾವಲಂಬನೆ ಕೇಂದ್ರದ ಅಧ್ಯಕ್ಷೆ ಶಿಲ್ಪಾ ಶೆಟ್ಟರ, ಟ್ರಸ್ಟ್‌ ಪ್ರಾಂತ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ, ರಜತ ಮಹೋತ್ಸವ ಸಮಾರೋಪ ಸಮಿತಿ ಕಾರ್ಯದರ್ಶಿ ಎಚ್.ಡಿ.ಪಾಟೀಲ, ಜಿಲ್ಲಾ ಸಮಿತಿ ಅಧ್ಯಕ್ಷ ಮಹಾಂತೇಶ ಶೆಟ್ಟರ, ಕಾರ್ಯದರ್ಶಿ ಡಾ.ಗಂಗಾಧರ ಅಂಗಡಿ ಮತ್ತಿತರರು ವೇದಿಕೆಯಲ್ಲಿದ್ದರು.

ಗಮನಸೆಳೆದ ಶೋಭಾಯಾತ್ರೆ

ಕಿಶೋರ ಸಂಗಮ ಕಾರ್ಯಕ್ರಮದ ಪ್ರಯುಕ್ತ ನಗರದಲ್ಲಿ ನಡೆದ ಕಿಶೋರಿಯರ ಶೋಭಾಯಾತ್ರೆಯೂ ಗಮನಸೆಳೆಯಿತು. ಬಿವಿವಿ ಸಂಘದ ಬೀಳೂರಜ್ಜನ ದೇವಸ್ಥಾನದಿಂದ ಹೊರಟ ಮೆರವಣಿಗೆ ಟೀಕಿನಮಠ, ಅಡತ್ ಬಜಾರ್, ಪೊಲೀಸ್ ಚೌಕಿ, ಎಂಜಿ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಮರಳಿತು.