ಐಡಿಬಿಐ ಬ್ಯಾಂಕ್ ಹಗರಣ ಸಿಐಡಿಗೆ ವರ್ಗಾವಣೆ

| Published : Aug 23 2024, 01:06 AM IST

ಸಾರಾಂಶ

ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಡೆದಿದ್ದ ಅಂದಾಜು ₹6 ಕೋಟಿಗೂ ಅಧಿಕ ಹಣದ ವರ್ಗಾವಣೆ ಹಗರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಬಾಗಲಕೋಟೆ ಎಸ್.ಪಿ.ಅಮರನಾಥ ರೆಡ್ಡಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಡೆದಿದ್ದ ಅಂದಾಜು ₹6 ಕೋಟಿಗೂ ಅಧಿಕ ಹಣದ ವರ್ಗಾವಣೆ ಹಗರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಬಾಗಲಕೋಟೆ ಎಸ್.ಪಿ.ಅಮರನಾಥ ರೆಡ್ಡಿ ಮಾಹಿತಿ ನೀಡಿದರು.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋಮವಾರ (ಆ.26ರಂದು) ಬಾಗಲಕೋಟೆಗೆ ಸಿಐಡಿ ಟೀಮ್ ಬರಲಿದೆ. ಐಡಿಬಿಐ ಬ್ಯಾಂಕ್ ಹಗರಣ ಸೇರಿದಂತೆ ಪ್ರವಾಸೋದ್ಯಮ, ಪಂಚಾಯತ್ ರಾಜ್, ಕಾರ್ಮಿಕ ಇಲಾಖೆ, ಅಲ್ಪಸಂಖ್ಯಾತರ, ಜವಳಿ ಮತ್ತು ಕೈ ಮಗ್ಗ ಇಲಾಖೆಗಳಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಸೇರಿ ಶಾಮೀಲಾಗಿದ್ದ 33 ಜನರ ಪೈಕಿ 19 ಜನರನ್ನು ಬಂಧಿಸಲಾಗಿದೆ. ಬ್ಯಾಂಕ್‌ನ ಮೂವರು ಸಿಬ್ಬಂದಿಯಿಂದ ನಡೆದಿದ್ದ ಪ್ರಕರಣ ನಂತರದಲ್ಲಿ ಇತರರು ಸಹ ಭಾಗಿಯಾಗಿದ್ದರ ಬಗ್ಗೆ ತನಿಖೆ ಕೈಗೊಳ್ಳಲಾಗಿತ್ತು ಎಂದ ಅವರು, ಈ ಪ್ರಕರಣದಲ್ಲಿ ಸರ್ಕಾರಿ ಇಲಾಖೆಗಳನ್ನೇ ಟಾರ್ಗೆಟ್ ಮಾಡಿದ್ದ ಖದೀಮರು, ಫೋರ್ಜರಿ ಲೆಟರ್ ಹೆಡ್ ಮತ್ತು ಸಹಿ ಮಾಡಿ ಹಣದ ಅಕ್ರಮ ವರ್ಗಾವಣೆ ಮಾಡಿದ್ದರು. ಇದೀಗ ಬೇಲ್ ಮೇಲೆ ಹೊರ ಬಂದಿರುವ ಆರೋಪಿಗಳ ವಿರುದ್ಧ ಮತ್ತೊಂದು ಪ್ರಕರಣದಲ್ಲಿ ಬಂಧನವನ್ನು ಸಹ ಪೊಲೀಸ್‌ ಇಲಾಖೆ ಮಾಡಲಿದೆ ಎಂದು ವಿವರಿಸಿದರು.

ಪ್ರಕರಣದ ಹಿನ್ನೆಲೆ:

ಪ್ರವಾಸೋದ್ಯಮ, ಪಂಚಾಯತ್ ರಾಜ್, ಕಾರ್ಮಿಕ ಇಲಾಖೆ, ಅಲ್ಪಸಂಖ್ಯಾತರ, ಜವಳಿ ಮತ್ತು ಕೈ ಮಗ್ಗ ಇಲಾಖೆಗಳಲ್ಲಿ ನಡೆದ ಅಕ್ರಮ ಹಣ ವರ್ಗಾವಣೆಯನ್ನು ಐದು ಇಲಾಖೆಯ ₹6.08 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಬಾಗಲಕೋಟೆಯ ಐಡಿಬಿಐ ಶಾಖೆಯಲ್ಲಿರುವ ಐದು ಇಲಾಖೆಗಳ ಖಾತೆಗಳಲ್ಲಿನ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದ ಬ್ಯಾಂಕ್ ಸಿಬ್ಬಂದಿ, ಇಲಾಖೆಗಳ ಹಣ ಒಟ್ಟು 33 ವಿವಿಧ ಖಾತೆಗಳಿಗೆ ಟ್ರಾನ್ಸಫರ್‌ ಆಗಿತ್ತು. ಇಲ್ಲಿಯವರೆಗೆ 9 ಜನ ಬ್ಯಾಂಕ್ ಸಿಬ್ಬಂದಿ ಸೇರಿ 19 ಜನರ ಬಂಧನ ಮಾಡಲಾಗಿತ್ತು.