ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ

| Published : Jul 15 2024, 01:50 AM IST

ಸಾರಾಂಶ

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲು ಮಾಡುವ ಪ್ರಕ್ರಿಯೆಯನ್ನು ಜು. ೧೫ರಿಂದ ೩೦ರವರೆಗೆ ವಿಶೇಷ ಆಂದೋಲನ ಮೂಲಕ ಕಾರ್ಯಾಚರಣೆ ಮಾಡಲಾಗುವುದು ಎಂದು ತಾಪಂ ಇಒ ಸುದರ್ಶನ್ ತಿಳಿಸಿದರು.

ತಿಪಟೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲು ಮಾಡುವ ಪ್ರಕ್ರಿಯೆಯನ್ನು ಜು. ೧೫ರಿಂದ ೩೦ರವರೆಗೆ ವಿಶೇಷ ಆಂದೋಲನ ಮೂಲಕ ಕಾರ್ಯಾಚರಣೆ ಮಾಡಲಾಗುವುದು ಎಂದು ತಾಪಂ ಇಒ ಸುದರ್ಶನ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಹೈಕೋರ್ಟ್ ನಿರ್ದೇಶನದ ಪ್ರಕಾರ ಹಾಗೂ ಆರ್.ಟಿ.ಇ ಕಾಯ್ದೆ ಅನ್ವಯ ಪ್ರಕಾರ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗಳನ್ನು ಮಾಡಬೇಕಾಗಿದ್ದು, ಈ ಸಮೀಕ್ಷೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಗುವುದು. ಪಂಚಾಯತ್ ರಾಜ್ಯ ಇಲಾಖೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿರುವ ಸಹಾಯ ಸಂಘಗಳ ಮೂಲಕ ೨೬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ಕೈಗೊಂಡು ಅಲ್ಲಿ ಕಂಡುಬರುವ ಶಾಲಾ ಬಿಟ್ಟ ಮಕ್ಕಳ ಮಾಹಿತಿಯನ್ನು ಪಡೆದು ಮೊಬೈಲ್ ಮೂಲಕ ಹಾಗೂ ಪಂಚಾಯಿತಿಯ ಶಿಕ್ಷಣ ಕಾರ್ಯಪಡೆ ಮೂಲಕ ದಾಖಲು ಮಾಡಿಸಿಕೊಳ್ಳಲಾಗುವುದು ಎಂದರು.

ಸಮೀಕ್ಷೆಯನ್ನು ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ, ಕೃಷಿ ಕಾರ್ಮಿಕ ವಲಯಗಳಲ್ಲಿ, ಕೈಗಾರಿಕಾ ಪ್ರದೇಶ, ಕೊಳಗೇರಿ ಪ್ರದೇಶಗಳು, ಬಸ್‌, ರೈಲ್ವೆ ನಿಲ್ದಾಣ, ಧಾರ್ಮಿಕ ಕೇಂದ್ರಗಳು, ಆಸ್ಪತ್ರೆ, ಹೋಟೆಲ್, ಚಿತ್ರಮಂದಿರ, ಕಲ್ಯಾಣ ಮಂದಿರಗಳಲ್ಲಿ ಇಟ್ಟಿಗೆ-ಕಾಯಿ ಫ್ಯಾಕ್ಟರಿ, ಸಣ್ಣ ಕಾರ್ಖಾನೆಗಳು, ಅನಾಥಾಶ್ರಮಗಳ ಮೂಲಕ ಮನೆ ಮನೆ ಸಮೀಕ್ಷೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಪ್ರಭಾರ ಕ್ಷೇತ್ರ ಸಮನ್ವಯಧಿಕಾರಿ ಉಮೇಶ್‌ಗೌಡ ಮತ್ತಿತರರಿದ್ದರು.