ಸಾರಾಂಶ
ಸೋಮವಾರಪೇಟೆ : ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕ್ರೀಡಾಕೂಟಗಳನ್ನು ಸರ್ಕಾರ ಏರ್ಪಡಿಸುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಹೇಳಿದರು.
ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಎ ವಲಯಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಕೂಟದ ಹೆಸರಿನಲ್ಲಿ ಎಲ್ಲಾ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿದಾಗ ಭಾತೃತ್ವದ ಮನೋಭಾವ ಮೂಡುತ್ತದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ಇಂತಹ ಸಂದರ್ಭದಲ್ಲಿ ಪರಿಚಯ ಮಾಡಿಕೊಂಡು, ಕಲಿಕೆ ಹಾಗು ಪರೀಕ್ಷೆ ಬಗ್ಗೆ ಪರಸ್ಪರ ಚರ್ಚಿಸಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ. ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಕ್ರೀಡೆಗೆ ಕೊಡಗಿನಲ್ಲಿ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗುತ್ತದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.
ಬೆಳಗ್ಗೆ ಕ್ರೀಡಾ ಧ್ವಜಾರೋಹಣವನ್ನು ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ ನೆರವೇರಿಸಿದರು. ಶಾಲೆ ಕ್ರೀಡಾ ನಾಯಕಿ ಎಚ್. ಆರ್. ದಿಶಿತಾ ಕ್ರೀಡಾ ಜ್ಯೋತಿ ತಂದರು. ವಿವಿಧ ಶಾಲೆಯ ಕ್ರೀಡಾಪಟುಗಳಿಂದ ಧ್ವಜ ವಂದನೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ. ಆರ್. ಮುತ್ತಣ್ಣ, ಮಾಜಿ ಎಂಎಲ್‌ಸಿ ಎಸ್. ಜಿ. ಮೇದಪ್ಪ, ಸಂಘದ ನಿರ್ದೇಶಕರಾದ ರಾಮಚಂದ್ರ, ನಂದಕುಮಾರ್, ಬಗ್ಗನ ಅನಿಲ್, ಶ್ರೀಹರಿ, ಕೆ.ಟಿ.ಪರಮೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರತ್ನಕುಮಾರ್, ಸಿಆರ್‌ಪಿ ಪ್ರೇಮಾ, ಮುಖ್ಯ ಶಿಕ್ಷಕಿ ಮಿಲ್ಟ್ರೆಡ್ ಗೊನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಇಂದಿರಾ, ಎಚ್.ಈ.ಬಸವರಾಜ್ ಇದ್ದರು. ಶಾಲಾ ನಾಯಕಿ ಪಂಚಮಿ, ವಿದ್ಯಾರ್ಥಿನಿಯರಾದ ನಮನ, ರೇಚಾನ ಕಾರ್ಯಕ್ರಮ ನಿರ್ವಹಿಸಿದರು.