ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಸುಮಾರು ₹46 ಸಾವಿರ ಕೋಟಿ ಬೆಳೆಹಾನಿಯಾಗಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
ಕೊಪ್ಪಳ: ಅಂತಹ ಕೆಟ್ಟ ಪರಿಸ್ಥಿತಿ ಏನಾದರೂ ಎದುರಾದರೆ ಸಾಲ ತಗೊಂಡಾದರೂ ರೈತರಿಗೆ ಪರಿಹಾರ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಜಿಲ್ಲೆಯ ವಿವಿಧೆಡೆ ಬರ ಪರಿಸ್ಥಿತಿ ವೀಕ್ಷಿಸಿದ ಅವರು, ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಸುಮಾರು ₹46 ಸಾವಿರ ಕೋಟಿ ಬೆಳೆಹಾನಿಯಾಗಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಎನ್‌ಡಿಆರ್‌ಎಫ್ ಮಾನದಂಡದಂತೆ ₹10ರಿಂದ ₹12 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರವನ್ನು ಕೋರಲಾಗುವುದು. ಕಳೆದ ಬಾರಿ ₹18 ಸಾವಿರ ಕೋಟಿ ಪರಿಹಾರ ಕೇಳಿದರೂ ₹3,500 ಕೋಟಿ ಮಾತ್ರ ನೀಡಲಾಗಿತ್ತು. ಈ ಬಾರಿ ಕೇಂದ್ರದಿಂದ ಹೆಚ್ಚಿನ ಪರಿಹಾರ ನಿರೀಕ್ಷಿಸಲಾಗಿದೆ ಎಂದರು.
ರೈತ ಕುಟುಂಬಕ್ಕೆ ₹1 ಲಕ್ಷ ನೆರವು: ಡೀಸೆಲ್ ಸಬ್ಸಿಡಿ, ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳ ಮೂಲಕ ರೈತ ಕುಟುಂಬಕ್ಕೆ ವರ್ಷಕ್ಕೆ ಸುಮಾರು ₹1 ಲಕ್ಷದಷ್ಟು ನೆರವು ನೀಡಲಾಗುತ್ತಿದೆ. 50 ಲಕ್ಷ ರೈತರಿಗೆ ತಲಾ ₹2,500ರಂತೆ ಬರ ಪರಿಹಾರ ನೀಡಲು ₹1,250 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಕೆಟ್ಟಿದ್ದರೆ ಇಷ್ಟೊಂದು ಮೊತ್ತವನ್ನು ನೀಡಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ ₹52 ಸಾವಿರ ಕೋಟಿ ವೆಚ್ಚವಾಗುತ್ತಿದೆ. ಇದರಿಂದ ಸಣ್ಣಪುಟ್ಟ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ಒಂದು ತಿಂಗಳ ಪಾವತಿ ತಡವಾಗಬಹುದು. ಆದರೆ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಆರ್ಥಿಕ ಶಿಸ್ತು ಕಾಪಾಡಿಕೊಂಡೇ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.
ಸಾಲ ಮರುಪಾವತಿಗೆ 60 ತಿಂಗಳು: ಬರದಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮರುಪಾವತಿಗೆ 60 ತಿಂಗಳ ತಾತ್ಕಾಲಿಕ ತಡೆ (ಮೊರಟೋರಿಯಂ) ಅವಧಿ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಬೆಳೆ ವಿಮೆ ಪರಿಹಾರವನ್ನು ತ್ವರಿತವಾಗಿ ರೈತರಿಗೆ ತಲುಪಿಸಲು ವಿಮಾ ಕಂಪನಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಮೆಕ್ಕೆಜೋಳಕ್ಕೆ ಸೂಕ್ತ ಬೆಂಬಲ ಬೆಲೆ ನೀಡುವಂತೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.ರೈತರ ಸಂಕಷ್ಟದಲ್ಲಿ ರಾಜಕೀಯ ಮಾಡದೆ, ಕೇಂದ್ರದಿಂದ ಹೆಚ್ಚಿನ ಪರಿಹಾರ ಪಡೆಯಲು ರಾಜ್ಯದ ಎಲ್ಲ ಸಂಸದರು ಪಕ್ಷಾತೀತವಾಗಿ ಒತ್ತಡ ಹೇರಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದರೂ ರೈತರ ನೆರವಿಗೆ ಸರ್ಕಾರ ಬದ್ಧವಾಗಿದೆ ಎಂದು ಪರಮೇಶ್ವರ ಹೇಳಿದರು.
ಸಾರಿಗೆ ಸಂಸ್ಥೆಗಳಲ್ಲಿ ಡೀಸೆಲ್ ಖರೀದಿಗೆ ಹಣದ ಕೊರತೆಯಿಂದ ಬಸ್ ಸಂಚಾರಕ್ಕೆ ತೊಂದರೆಯಾಗಿದ್ದರೆ, ಅದನ್ನು ತಕ್ಷಣ ಸರಿಪಡಿಸಲಾಗುವುದು ಎಂದೂ ಸ್ಪಷ್ಟಪಡಿಸಿದರು.