ಸಾರಾಂಶ
ದಾಬಸ್‍ಪೇಟೆ: ಕಾಂಗ್ರೆಸ್ ನೇತೃತ್ವದ ಸರ್ಕಾರ ಬಡವರ ಪರ, ಹಿಂದುಳಿದವರ ಪರವಿದ್ದು, ಅನಧಿಕೃತ ಬಡಾವಣೆಗಳಲ್ಲಿನ ನಿವೇಶನ, ಮನೆಗಳಿಗೆ ಬಿ- ಖಾತಾ ಅಧಿಕೃತ ದಾಖಲೆ ನೀಡಿ ಸಕ್ರಮಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಉಚಿತವಾಗಿ ಬಿ- ಖಾತೆ ಮಾಡಿಸಿಕೊಳ್ಳಲು ಅವಕಾಶವಿದ್ದು, ಯಾರಾದರೂ ಹಣ ಕೇಳಿದರೆ ನನಗೆ ಮಾಹಿತಿ ನೀಡಿ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರಿಗಾಗಿ ನಾನೇ ಸ್ವತಃ ನಗರಸಭೆಯಲ್ಲಿ ಕುಳಿತು ಅಭಿಯಾನಕ್ಕೆ ಚಾಲನೆ ನೀಡಿ ಅನುಕೂಲ ಮಾಡಿಕೊಡುತ್ತೇನೆ. ಯಾರೂ ಸಹ ಮಧ್ಯವರ್ತಿಗಳು, ಅಧಿಕಾರಿಗಳಿಗೆ ಹಣ ನೀಡಬೇಡಿ, ಉಚಿತವಾಗಿ ಖಾತೆ ಮಾಡಿಸುವ ಕೆಲಸವನ್ನು ಮಾಡಲಾಗುತ್ತದೆ, ಹಣ ಕೇಳಿದರೆ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡದಂತೆ ಸಿಎಂ ಸಿದ್ದರಾಮಯ್ಯನವರು ಆದೇಶ ನೀಡಿದ್ದು, ಅಂತಹ ಲೇಔಟ್ ಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ಪಡೆದು ಸೂಕ್ತಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇನೆ. ಲೇಔಟ್ ಗಳನ್ನು ನಿರ್ಮಿಸಿರುವ ಮಾಲೀಕರು ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ರಸ್ತೆ ಸಂಪರ್ಕ ನೀಡದೇ ಇದ್ದರೆ ಗಮನಕ್ಕೆ ತಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ವಹಿಸಲು ಸೂಚನೆ ನೀಡುತ್ತೇನೆ ಎಂದರು.