ಅಯಾಜ್‌ ಖಾನ್‌ಗೆ ಟಿಕೆಟ್‌ ನೀಡಿದ್ರೆ ಬಿಜೆಪಿ ಪ್ರಾಬಲ್ಯ ಅಂತ್ಯ

| Published : Mar 16 2024, 01:47 AM IST

ಸಾರಾಂಶ

ಈ ಬಾರಿ ಎಲ್ಲ ಧರ್ಮ, ಜಾತಿ, ಜನಾಂಗದವರನ್ನು ಕೊಂಡೊಯ್ಯುವ ಸಾಮರ್ಥ್ಯ ಶಿಕ್ಷಣ ಪ್ರೇಮಿ ಅಯಾಜ್‌ ಖಾನ್‌ರಲ್ಲಿದ್ದು, ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ಜಿಲ್ಲೆಯಲ್ಲಿ ಬಿಜೆಪಿಯ ಪ್ರಾಬಲ್ಯ ಅಂತ್ಯಗೊಳ್ಳಲಿದೆ

ಬೀದರ್‌: 52 ವರ್ಷಗಳ ಹಿಂದೆ ಬೀದರ್‌ನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲಾಗಿತ್ತು. ಅದಾದ ಬಳಿಕ ಇಲ್ಲಿ ಮುಸ್ಲಿಮ್‌ ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ ಟಿಕೆಟ್ ನೀಡಲಿಲ್ಲ. ಈ ಬಾರಿ ಎಲ್ಲ ಧರ್ಮ, ಜಾತಿ, ಜನಾಂಗದವರನ್ನು ಕೊಂಡೊಯ್ಯುವ ಸಾಮರ್ಥ್ಯ ಶಿಕ್ಷಣ ಪ್ರೇಮಿ ಅಯಾಜ್‌ ಖಾನ್‌ ಅವರಲ್ಲಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ಜಿಲ್ಲೆಯಲ್ಲಿ ಬಿಜೆಪಿಯ ಪ್ರಾಬಲ್ಯ ಅಂತ್ಯಗೊಳ್ಳಲಿದೆ ಎಂದು ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ವಹೀದ್‌ ಲಖನ್‌ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ಎಲ್ಲ ಧರ್ಮದವರನ್ನು ಕೊಂಡೊಯ್ಯುವ ಪಕ್ಷವಾಗಿದ್ದರೂ ಆಂತರಿಕ ಕಚ್ಚಾಟದಿಂದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದೆ. ಅಯಾಜ್‌ ಖಾನ್‌ ಜ್ಯಾತ್ಯತೀತ ವ್ಯಕ್ತಿಯಾಗಿದ್ದು, ಎಲ್ಲರನ್ನು ಒಂದೇ ವೇದಿಕೆಯಲ್ಲಿ ಕೊಂಡೊಯ್ಯುವರು ಅವರಿಗೆ ಸರ್ವ ಧರ್ಮಗಳ ಬೆಂಬಲವಿದ್ದು, ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರಿಗೆ ಮಣೆ ಹಾಕಬೇಕಿದೆ ಎಂದರು.

ಬಿಜೆಪಿ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಿದೆ. ಕಾನೂನು ಸುವ್ಯವಸ್ಥೆ ಬಿಗಡಾಯಿಸಿದೆ, ಧರ್ಮ-ಧರ್ಮಗಳ ಮಧ್ಯ, ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತಿ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಅಯಾಜ್‌ ಖಾನ್‌ಗೆ ಕಾಂಗ್ರೆಸ್‌ ಟಿಕೆಟ್ ನೀಡಿ. ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡು ಬರುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದರು. ವಿವಿಧ ಸಮಾಜದ ಮುಖಂಡರಾದ ರಾಜಕುಮಾರ ಗೂನ್ನಳ್ಳಿ, ಚಂದ್ರಕಾಂತ ನಿರೋಟೆ, ಜಯಸುದಾಸ ಅಣದುರೆ, ಜಯರಾಜ ದೊಡಮನಿ, ಸಂದೀಪ ಇದ್ದರು.