ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಉಂಟಾಗಿರುವ ಸಂಘರ್ಷದ ಮಾದರಿಯಲ್ಲೇ ಉಭಯ ಜಿಲ್ಲೆಗಳ ನಡುವೆ ನೀರಿಗಾಗಿ ಹೋರಾಟ ಆರಂಭವಾಗುವ ಸಾಧ್ಯತೆಯನ್ನು ಪರಿಸರಾಸಕ್ತರು ಮತ್ತು ನದಿ ತಿರುವು ವಿರೋಧಿಗಳು ವ್ಯಕ್ತಪಡಿಸುತ್ತಿದ್ದಾರೆ.

ಕಾರವಾರ: ಬೇಡ್ತಿ ನದಿಯ ನೀರನ್ನು ಹಾವೇರಿ ಜಿಲ್ಲೆಗೆ ತಿರುಗಿಸುವ ಯೋಜನೆ ಜಾರಿಯಾದರೆ, ಮುಂದಿನ ದಿನಗಳಲ್ಲಿ ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ನಡುವೆ ಜಲಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಉಂಟಾಗಿರುವ ಸಂಘರ್ಷದ ಮಾದರಿಯಲ್ಲೇ ಉಭಯ ಜಿಲ್ಲೆಗಳ ನಡುವೆ ನೀರಿಗಾಗಿ ಹೋರಾಟ ಆರಂಭವಾಗುವ ಸಾಧ್ಯತೆಯನ್ನು ಪರಿಸರಾಸಕ್ತರು ಮತ್ತು ನದಿ ತಿರುವು ವಿರೋಧಿಗಳು ವ್ಯಕ್ತಪಡಿಸುತ್ತಿದ್ದಾರೆ.ಈಗಾಗಲೇ ಬೇಸಿಗೆಯಲ್ಲಿ ಬೇಡ್ತಿ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನದಿಯ ನೀರನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿದರೆ ಸ್ಥಳೀಯ ಜನರು, ಕೃಷಿ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಭವಿಷ್ಯದಲ್ಲಿ ಉತ್ತರ ಕನ್ನಡದಲ್ಲಿ ನೀರಿನ ಕೊರತೆ ಎದುರಾದಾಗ ಹಾವೇರಿ ಜಿಲ್ಲೆಯಿಂದ ನೀರು ಬಿಡುವಂತೆ ಆಗ್ರಹಿಸುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಇದರಿಂದ ಎರಡು ಜಿಲ್ಲೆಗಳ ಜನರ ನಡುವೆ ವೈಮನಸ್ಸು ಮತ್ತು ಸಂಘರ್ಷಕ್ಕೆ ಕಾರಣವಾಗುವ ಆತಂಕವಿದೆ.

ಇಂದಿನ ದಿನಗಳಲ್ಲಿ ನೀರಿನ ಬಳಕೆ ಹೆಚ್ಚುತ್ತಿರುವುದೇ ಇಂತಹ ಯೋಜನೆಯ ಬೇಡಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ, ನೀರಿನ ಸದ್ಬಳಕೆ, ಮಳೆನೀರು ಸಂಗ್ರಹ, ಹೊಸ ಕೆರೆಗಳ ನಿರ್ಮಾಣ ಹಾಗೂ ಈಗಿರುವ ಕೆರೆಗಳ ಹೂಳು ತೆಗೆಯುವ ಮೂಲಕ ಅಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸ್ಥಳೀಯ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಬದಲು ಮತ್ತೊಂದು ಜಿಲ್ಲೆಯ ನದಿಯನ್ನೇ ಅವಲಂಬಿಸುವುದು ದೂರದೃಷ್ಟಿಯ ಕ್ರಮವಲ್ಲ ಎಂಬುದು ವಿರೋಧಿಗಳ ವಾದ.ಈ ನಡುವೆ ಬೇಡ್ತಿ ನದಿ ತಿರುವು ಯೋಜನೆ ವಿಚಾರವಾಗಿ ಹಾವೇರಿಯ ಕೆಲವು ಶ್ರೀಗಳು ಹಾಗೂ ಸ್ವರ್ಣವಲ್ಲಿ ಶ್ರೀಗಳ ನಡುವೆ ಗುರುವಾರ ಮಹತ್ವದ ಮಾತುಕತೆ ನಡೆಯಲಿದೆ.

ಆದರೆ, ಬೇಡ್ತಿ ನದಿಯ ನೀರನ್ನು ಹಾವೇರಿಗೆ ನೀಡುವ ವಿಚಾರದಲ್ಲಿ ಉತ್ತರ ಕನ್ನಡದ ಜನರ ವಿರೋಧ ಸ್ಪಷ್ಟವಾಗಿದೆ. ನದಿಯ ಅಸ್ತಿತ್ವ, ಪರಿಸರ ಸಮತೋಲನ ಮತ್ತು ಭವಿಷ್ಯದ ಕುಡಿಯುವ ನೀರಿನ ಹಿತದೃಷ್ಟಿಯಿಂದ ಯೋಜನೆಯನ್ನು ಕೈಬಿಡಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.ನಮ್ಮಲ್ಲಿಯ ಮಳೆ ನೀರನ್ನು ಸಂಗ್ರಹಿಸದೆ ಹರಿಬಿಟ್ಟು, ಬೇರೆ ಜಿಲ್ಲೆಯಿಂದ ನೀರು ತರುವ ಯೋಜನೆ ರೂಪಿಸುವುದು ಕೇಂದ್ರೀಕೃತ ಮಾದರಿ. ಇದು ಸರಿಯಲ್ಲ. ಹಾವೇರಿ ಜಿಲ್ಲೆಯಲ್ಲಿ 2900 ಕೆರೆಗಳಿವೆ. ಈ ಕೆರೆ, ಜಲಾಶಯಗಳ ಹೂಳು ತೆಗೆಯುವ ಕಾಮಗಾರಿ ನಡೆದು ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳ ಮಾಡಬೇಕು. ಆಗ ಅಲ್ಲಿನ ನೀರಿನ ಸಮಸ್ಯೆಗೆ ಅಲ್ಲೆ ಪರಿಹಾರ ದೊರೆಯಲಿದೆ ಎಂದು ಪರಿಸರ ತಜ್ಞರಾದ ಶಿವಾನಂದ ಕಳವೆ ತಿಳಿಸಿದರು.