ಎನ್.ಮಹೇಶ್ ದಲಿತ ಜನಾಂಗಕ್ಕೆ ಅಪಮಾನ ಮಾಡಿದ್ದಾರೆ ಬಿಜೆಪಿ ಪಕ್ಷಕ್ಕೆ ದಲಿತ ಜನಾಂಗದ ಬಗ್ಗೆ ಗೌರವವಿದ್ದರೆ ಎನ್.ಮಹೇಶ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬಾರದು ಅವರನ್ನು ಕೂಡಲೇ ಎನ್. ಮಹೇಶ್‌ರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಬಿಎಸ್ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎನ್.ಮಹೇಶ್ ದಲಿತ ಜನಾಂಗಕ್ಕೆ ಅಪಮಾನ ಮಾಡಿದ್ದಾರೆ ಬಿಜೆಪಿ ಪಕ್ಷಕ್ಕೆ ದಲಿತ ಜನಾಂಗದ ಬಗ್ಗೆ ಗೌರವವಿದ್ದರೆ ಎನ್.ಮಹೇಶ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬಾರದು ಅವರನ್ನು ಕೂಡಲೇ ಎನ್. ಮಹೇಶ್‌ರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಬಿಎಸ್ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾತನಾಡಿ, ರಾಮನಗರದ ಬಿಜೆಪಿ ಕಾರ್ಯಕರ್ತರ ಸಭೆಯೊಂದರಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಕೊಳ್ಳೇಗಾಲದ ದಲಿತ ಜನಾಂಗದ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವುದು ಖಂಡನೀಯ.

ಹೊಲೆಯ ಎಂಬುದು ಅಗೌರವ ಸೂಚಕ ಅಲ್ಲ. ಅದೊಂದು ಹೆಮ್ಮೆಯ ಸಂಕೇತ. ಈ ಜನಾಂಗದಲ್ಲಿ ಹುಟ್ಟಲು ಹೆಮ್ಮೆಪಡಬೇಕು. ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್‌ಗೆ ಜನ್ಮ ಕೊಟ್ಟ ಜನಾಂಗವಾಗಿದೆ.ಒಂದು ವೇಳೆ ಪಕ್ಷದಲ್ಲಿಯೇ ಉಳಿಸಿಕೊಂಡರೆ ಎನ್.ಮಹೇಶ್‌ಗೆ ಜನಾಂಗದ ಬಗ್ಗೆ ಇರುವ ಭಾವನೆ ಬಿಜೆಪಿಗೂ ಇರಲಿದೆ. ಎನ್.ಮಹೇಶ್‌ರಂತ ಅವಿವೇಕಿ, ಸಮಾಜದ್ರೋಹಿಗೆ ಮಾನ್ಯತೆ ಕೊಡಬಾರದು. ಜನಾಂಗವು ಎನ್.ಮಹೇಶ್‌ಗೆ ಅನ್ನ, ನೀರು, ಹಣ, ಕಾರು ಕೊಟ್ಟಿದೆ ಎಂದರು.

ಎನ್.ಮಹೇಶ್ ಮೂರು ಬಾರಿ ಸೋತಾಗಲು ಜನಾಂಗ ಅವರನ್ನು ಕೈ ಬಿಡಲಿಲ್ಲ. 2019ರ ವಿಧಾನಸಭಾ ಚುನಾವಣೆಯಲ್ಲಿ 72 ಸಾವಿರ ಮತಗಳ ಪೈಕಿ 50 ಸಾವಿರಕ್ಕೂ ಹೆಚ್ಚು ಮತಗಳನ್ನು ದಲಿತ ಜನಾಂಗ ನೀಡಿದೆ. ಆದರೆ, ಈತ ಜನಾಂಗಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ಸೋತಾಗ ಪಶ್ಚತ್ತಾಪಡಬೇಕಿತ್ತು. ಆದರೆ, ಜನಾಂಗವನ್ನು ಹೊಣೆ ಮಾಡುತ್ತಿರುವುದು ರಾಜಕೀಯ ಪಿತೂರಿಯಾಗಿದೆ. ಬಿಜೆಪಿಯಲ್ಲಿ ನೆಲೆ ಕಲ್ಪಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಎಸ್ಪಿ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಎಲ್ಲ ಕಡೆಯೂ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮತದಾರರು ಆಮಿಷಕ್ಕೆ ಬಲಿಯಾಗಬಾರದು. ಹಣ, ಹೆಂಡ ಹಂಚದಂತೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮವಹಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಪದಾಧಿಕಾರಿಗಳಾದ ರಾಜೇಂದ್ರ, ಪ್ರಕಾಶ್, ರಾಜಶೇಖರ್, ಎಸ್.ಪಿ.ಮಹೇಶ್ ಇದ್ದರು.