ಬಿಜೆಪಿಗೆ ಪಾಠ ಕಲಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ಸಚಿವ ಶಿವರಾಜ ತಂಗಡಗಿ

| Published : Mar 25 2024, 12:48 AM IST

ಬಿಜೆಪಿಗೆ ಪಾಠ ಕಲಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ಸಚಿವ ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಳ್ಳನ್ನೇ ಪದೇ ಪದೇ ಹೇಳಿ ವಂಚಿಸುತ್ತಿರುವ ಬಿಜೆಪಿಯವರಿಗೆ ಜನ ಈ ಚುನಾವಣೆಯಲ್ಲಿ ಪಾಠ ಕಲಿಸದಿದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ.

ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆ ಸಚಿವ ಶಿವರಾಜ ತಂಗಡಗಿಕನ್ನಡಪ್ರಭ ವಾರ್ತೆ ಕಾರಟಗಿ

ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ದೇಶದ ಜನರ ಬದುಕು ಮತ್ತು ನೆಮ್ಮದಿ ಹಾಳು ಮಾಡುತ್ತಿರುವ ಮತ್ತು ಸುಳ್ಳನ್ನೇ ಪದೇ ಪದೇ ಹೇಳಿ ವಂಚಿಸುತ್ತಿರುವ ಬಿಜೆಪಿಯವರಿಗೆ ಜನ ಈ ಚುನಾವಣೆಯಲ್ಲಿ ಪಾಠ ಕಲಿಸದಿದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಕನಕಗಿರಿ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರ ಮತ್ತು ಮುಖಂಡರಿಗೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು.

ಕಾಂಗ್ರೆಸ್ ಪರಂಪರಾಗತವಾಗಿ ದಲಿತರ, ಶೋಷಿತರ, ಕಾರ್ಮಿಕರ, ರೈತರ ಪರವಾದ ನೀತಿಗಳ ಮೂಲಕ ಜನರ ಪರವಾಗಿದೆ. ರಾಜ್ಯದ ರೈತರು ಆರು ತಿಂಗಳಿಂದ ಬರಗಾಲ ಎದುರುಸುತ್ತಿದ್ದಾರೆ. ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಬಂದು ವೀಕ್ಷಿಸಿ ಹೋಗಿದೆ. ಇವರಿಂದ ನಯಾಪೈಸೆ ಬರ ಪರಿಹಾರ ಬಂದಿಲ್ಲ. ಇವರು ಬಡವರ, ರೈತರ ಪರವಾದ ಸರ್ಕಾರವೇ ಎಂದು ತಂಗಡಗಿ ಪ್ರಶ್ನಿಸಿದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಮಾತನಾಡಿ, ಕ್ಷೇತ್ರದ ಜನರು ಈ ಬಾರಿ ಆಶೀರ್ವಾದ ಮಾಡುತ್ತಾರೆ ಎನ್ನುವ ಭರವಸೆ ಇದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳು ಪ್ರತಿ ಮನೆ ಮನೆಗೂ ತಲುಪಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿವೆ ಎಂದರು. ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ್, ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಬಸವರಾಜ ನೀರಗಂಟಿ, ಮಾಜಿ ಸದಸ್ಯ ವೀರೇಶ ಸಮಗಂಡಿ, ಶರಣೇಗೌಡ ಮಾಲಿ ಪಾಟೀಲ್, ಗಂಗಾಧರಯ್ಯಸ್ವಾಮಿ, ಪುರಸಭೆ ಸದಸ್ಯೆ ಸೌಮ್ಯಾ ಕಂದಗಲ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಶಿಧರ್‌ಗೌಡ ಪಾಟೀಲ್ ಮತ್ತು ಶಿವರೆಡ್ಡಿ ನಾಯಕ, ಮಹಮದ್ ರಫಿ, ಕೆಪಿಸಿಸಿ ಸದಸ್ಯ, ಶರಣಪ್ಪ ಭತ್ತದ ಇತರರು ಮಾತನಾಡಿದರು.

ಶರಣಬಸವರಾಜ ರೆಡ್ಡಿ, ಶರಣಪ್ಪ ಪರಕಿ ಮತ್ತು ಅಯ್ಯಪ್ಪ ಉಪ್ಪಾರ ಕಾರ್ಯಕ್ರಮ ನಿರ್ವಹಿಸಿದರು. ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾಯಿತ ಜನಪ್ರತಿನಿಧಿಗಳು, ಪುರಸಭಾ ಸದಸ್ಯರು, ಪಟ್ಟಣದ ಪಂಚಾಯಿತಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಪದಾಧಿಕಾರಿಗಳಿದ್ದರು. ದೇಣಿಗೆ:

ಬ್ಲಾಕ್ ಕಾಂಗ್ರೆಸ್‌ನ ಎನ್‌ಎಸ್‌ಯುಐ ಅಧ್ಯಕ್ಷ ಚಳ್ಳೂರು ಗ್ರಾಮದ ಲಿಂಗೇಶ್ ಕಲ್ಗುಡಿ ಮತ್ತು ಅವರ ಗೆಳೆಯರು ಅಭ್ಯರ್ಥಿ ರಾಜಶೇಖರ ಹಿಟ್ನಾಳಗೆ ₹ ೧೧ ಸಾವಿರ ದೇಣಿಗೆ ನೀಡಿದರು. ಪಕ್ಷದ ಯುವ ಕಾರ್ಯಕರ್ತರೆಲ್ಲ ಸೇರಿ ಈ ದೇಣಿಗೆಯನ್ನು ಕಾರ್ಯಕ್ರಮದಲ್ಲಿ ಅಭ್ಯರ್ಥಿ ರಾಜಶೇಖರಗೆ ನೀಡಿ ವಿಶೇಷ ಗಮನ ಸೆಳೆದರು.