ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಪ್ರೋತ್ಸಾಹ ಮತ್ತು ಸೂಕ್ತ ಮಾರ್ಗದರ್ಶನ ದೊರೆತಾಗ ಅವರಲ್ಲಿನ ಪ್ರತಿಭೆ ಬೆಳವಣಿಗೆಯಾಗುವುದರ ಜೊತೆಗೆ, ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ ಎಂದು ಅಭ್ಯೂದಯ ಸೇವಾ ಸಂಸ್ಥೆ ಪದಾಧಿಕಾರಿ ಚಂದ್ರಶೇಖರ್‌ ಹೇಳಿದರು.

ನಗರದ ಬಿ. ಎಚ್. ರಸ್ತೆಯಲ್ಲಿರುವ ಸುಮಾರು 105 ವರ್ಷಗಳ ಇತಿಹಾಸ ಹೊಂದಿರುವ ರಾಮಣ್ಣ ಶಾಲೆ ಎಂದೇ ಪ್ರಸಿದ್ಧವಾದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಭ್ಯುದಯ ಸೇವಾಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಹಾಗೂ ನಿತ್ಯೋಪಯೋಗಿ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಭ್ಯುದಯ ಸೇವಾ ಸಂಸ್ಥೆ ರಾಜ್ಯಾದ್ಯಂತ 150 ಶಾಖೆಗಳನ್ನು ಹೊಂದಿದ್ದು, ಈ ಶಾಖೆಗಳ ಮೂಲಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿವರ್ಷ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ಸಾಮಗ್ರಿಗಳನ್ನು ಒದಗಿಸುವ ಮೂಲಕ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಮೌಲ್ಯಗಳು, ಸಂಸ್ಕೃತಿ ಹಾಗೂ ನಾಗರಿಕ ಹೊಣೆಗಾರಿಕೆಗಳ ಕುರಿತು ಅರಿವು ಮೂಡಿಸುವ ಮೂಲಕ ಸಮಾಜಮುಖಿ ಚಿಂತನೆ ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಶ್ವೇತಾ ಅರಸ್ ಹಾಗೂ ಅವರ ಸಹಚರರ ಸಹಕಾರದೊಂದಿಗೆ ಸುಮಾರು ನೂರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ಜತೆಗೆ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಗಿದೆ. ಇಂತಹ ಸೇವಾ ಕಾರ್ಯಕ್ಕೆ ಸಹಕಾರ ನೀಡಿದ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಶಾಲೆಯ ಹಳೇ ವಿದ್ಯಾರ್ಥಿನಿ ಶ್ವೇತಾ ಅರಸ್ ಮಾತನಾಡಿ, ಜೇಬು ಖಾಲಿಯಾಗಿದ್ದರೂ ಬುದ್ಧಿ ಖಾಲಿಯಾಗಬಾರದು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಅನೇಕ ಸ್ವಯಂಸೇವಾ ಸಂಸ್ಥೆಗಳು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿವೆ. ಜ್ಞಾನ ಸಂಪಾದನೆಗೆ ಶ್ರಮಿಸಿದಾಗ ಮಾತ್ರ ಜೀವನದಲ್ಲಿ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ತಾವು ವಿದ್ಯಾಭ್ಯಾಸ ಮಾಡಿದ ಶಾಲೆ ಹಾಗೂ ತಾವು ಬೆಳೆದ ಸಮಾಜಕ್ಕೆ ತಮ್ಮಿಂದಾದ ಸಹಾಯವನ್ನು ವಿವಿಧ ರೂಪಗಳಲ್ಲಿ ನೀಡುವುದರಿಂದ ಇತರ ವಿದ್ಯಾರ್ಥಿಗಳಿಗೂ ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗುತ್ತದೆ. ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿದರೂ ಶಿಕ್ಷಣ ಪಡೆಯಲು ಪಟ್ಟ ಶ್ರಮದ ಫಲವಾಗಿ ಇಂದು ಮತ್ತೊಬ್ಬರಿಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.ಮುಖ್ಯಶಿಕ್ಷಕಿ ಕರಿಯಮ್ಮ ಮಾತನಾಡಿ, ಸುಸಜ್ಜಿತ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅಭ್ಯುದಯ ಸೇವಾಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶ್ವೇತಾ ಅರಸ್ ಅವರು ಸಂಸ್ಥೆಯ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಲಿಕಾ ಸಾಮಗ್ರಿ ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ಶಿಕ್ಷಕಿ ವೀಣಾ ಮಾತನಾಡಿದರು. ಶಿಕ್ಷಕರಾದ ಆಶಾಮೇರಿ, ಮಮತಾ, ಶೀಲಾ, ಶಶಿಧರ್, ಪ್ರೀತಿ, ಪೋಷಕರಾದ ಶಶಿಕುಮಾರ್‌, ಕೃಷ್ಣಪ್ಪ, ಗೌತಮ್, ನಾಗರಾಜು, ನೂರ್‌ಜಾನ್, ಸೌಮ್ಯ, ಋತು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.