ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸರ್ಕಾರಿ ಕೆಲಸ ನಿರ್ವಹಿಸುವಾಗ ವಿಳಂಬ ಹಾಗೂ ಭ್ರಷ್ಟಾಚಾರದ ಬಗ್ಗೆ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಎಸ್‌ಪಿ ನಂದಿನಿ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರಿಂದ ವಿವಿಧ ಸಮಸ್ಯೆ ಹಾಗೂ ಕುಂದುಕೊರತೆಗಳ ಬಗ್ಗೆ ಆಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನಿರ್ಭೀತಿಯಿಂದ ಹೇಳಿಕೊಳ್ಳಲು ಅವಕಾಶ ಕಲ್ಪಿಸಿದೆ. ಕಂದಾಯ ಇಲಾಖೆಯಿಂದ ಹೆಚ್ಚು ಸಮಸ್ಯೆಗಳು ಬರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ಸರ್ವೇ ಇಲಾಖೆ, ಖಾತೆ ಬದಲಾವಣೆ, ಪೌತಿಖಾತೆ ಸೇರಿದಂತೆ ಇನ್ನಿತರ ದಾಖಲೆಯನ್ನು ನೀಡಲು ವಿಳಂಬ ಮತ್ತು ಹಣದ ಬೇಡಿಕೆಯ ಬಗ್ಗೆ ದೂರು ನೀಡಬಹುದು. ವಿಶೇಷವಾಗಿ ಲೋಕೋಪಯೋಗಿ ಮತ್ತು ಆರ್‌ಡಿಪಿಆರ್ ಇಲಾಖೆಯಿಂದ ಕಾಮಗಾರಿ ನಡೆಸದೆ ಬಿಲ್ ಪಾವತಿ ಬಗ್ಗೆ, ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ, ಔಷಧಿ ವಿತರಣೆಯಲ್ಲಿ ಅಸಮರ್ಪಕತೆ, ಅಸ್ವಚ್ಛತೆ, ಶಾಲೆಗಳಲ್ಲಿ ಸರಿಯಾಗಿ ಬಿಸಿಯೂಟ ಮತ್ತು ಮೊಟ್ಟೆ ಹಾಗೂ ಸೌಲಭ್ಯ ನೀಡದ ಬಗ್ಗೆ, ತಾಲೂಕು ಪಂಚಾಯತಿಯಿಂದ ಗ್ರಾಮ ಪಂಚಾಯತಿಗಳಲ್ಲಿ ಪಿಡಿಒ ಕರ್ತವ್ಯ ಪಾಲನೆ ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ನಿಖರವಾಗಿ ದೂರು ನೀಡಬಹುದು ಮತ್ತು ಹಣದ ಬೇಡಿಕೆಯಟ್ಟರೆ ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಲೋಕಾಯುಕ್ತ ಸಂಸ್ಥೆ ಬದ್ಧವಾಗಿದೆ ಎಂದರು.
ಬೇಲೂರು ತಾಲೂಕು ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಪಡೆಯಲಾಗಿದೆ. ಕಂದಾಯ, ಪುರಸಭೆ, ಆರ್‌ಡಿಪಿಆರ್, ತಹಸೀಲ್ದಾರ್, ಅಲ್ಪಸಂಖ್ಯಾತ ನಿಗಮ, ಸರ್ವೇ ಸೇರಿದಂತೆ ಒಟ್ಟು ಹತ್ತು ದೂರು ಅರ್ಜಿಗಳು ಬಂದಿದೆ. ಎಲ್ಲಾ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರ ಮಾಡಲಾಗಿದೆ. ಅಲ್ಲದೆ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಕರ್ನಾಟಕ ಲೋಕಾಯುಕ್ತರಿಂದ ೨೬ ಇಲಾಖೆಯ ಕುಂದುಕೊರತೆಗಳನ್ನು ನಿವಾರಿಸಲು ಸ್ಥಳಕ್ಕೆ ಭೇಟಿ ನೀಡುವ ಅಧಿಕಾರವಿದೆ. ಎಲ್ಲೆಲ್ಲಿ ಸಮಸ್ಯೆ ಕಂಡು ಬಂದ ಸ್ಥಳಕ್ಕೆ ಈಗಾಗಲೇ ಭೇಟಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಬೇಲೂರು ತಹಸೀಲ್ದಾರ್ ಎಂ. ಮಮತಾ, ಹಾಸನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ಮತ್ತು ಶಿಲ್ಪ, ತಾಲೂಕು ಪಂಚಾಯತಿ ಇಒ ವಸಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಆರೋಗ್ಯಾಧಿಕಾರಿ ಡಾ.ವಿಜಯ್, ಕೃಷಿ ಇಲಾಖೆ ತಾಂತ್ರಿಕಾಧಿಕಾರಿ ಕಾವ್ಯ, ಸಮಾಜ ಕಲ್ಯಾಣ ಉಪ ನಿರ್ದೇಶಕ ರಮೇಶ್, ಅನ್ವರ್ ಭಾಷಾ, ಅಬಕಾರಿ ಇಲಾಖೆ ಚಂದನ, ಇತರರು ಹಾಜರಿದ್ದರು.