ಸಾರಾಂಶ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಕ್ಕಂತೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಾವು ಜನರ ಭಾವನೆಗಳಿಗಾಗಿ ರಾಜಕೀಯ ಮಾಡುತ್ತಿಲ್ಲ, ಜನರ ಬದುಕಿಗಾಗಿ ರಾಜಕೀಯ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಹಾವೇರಿ : ಅಧಿಕಾರ ನಶ್ವರ, ಕಾಂಗ್ರೆಸ್ ಕಾರ್ಯಕ್ರಮಗಳು ಅಜರಾಮರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಕ್ಕಂತೆ. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಾವು ಜನರ ಭಾವನೆಗಳಿಗಾಗಿ ರಾಜಕೀಯ ಮಾಡುತ್ತಿಲ್ಲ, ಜನರ ಬದುಕಿಗಾಗಿ ರಾಜಕೀಯ ಮಾಡುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸವಣೂರು ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾವೇಶದಲ್ಲಿ ಅವರು ಮಾತನಾಡಿ, ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯ ಗೆಲುವು ಯಾಸೀರ್ ಖಾನ್ ಪಠಾಣರ ಗೆಲುವಲ್ಲ, ಇದು ಕಾರ್ಯಕರ್ತರು, ಕ್ಷೇತ್ರದ ಮತದಾರರ ಗೆಲುವು. ಶಿಗ್ಗಾಂವಿ ಕ್ಷೇತ್ರದ ಜನತೆ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಿ ರಾಜ್ಯಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.
ಚುನಾವಣಾ ಸಮೀಕ್ಷೆಗಳ ಬಗ್ಗೆ ನಮಗೆ ನಂಬಕೆಯಿಲ್ಲ. ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ನಾನು ಆಗಲೇ ಹೇಳಿದ್ದೆ. ಜನತೆ ಮೂರು ಕ್ಷೇತ್ರದಲ್ಲಿ ಗೆಲ್ಲಿಸುವ ಮೂಲಕ ನಮಗೆ ಶಕ್ತಿ ಕೊಟ್ಟಿದ್ದಾರೆ. ನಮ್ಮ ಬಲ ಈಗ 138 ಆಗಿದೆ. ಉಪಚುನಾವಣೆ ಗೆಲುವಿನಿಂದ ಸಿಎಂ, ಸಚಿವರ ಹಾಗೂ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಈ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುತ್ತೇವೆ. ಕ್ಷೇತ್ರದ ಜನರಿಗೆ ಸಹಾಯ ಮಾಡುತ್ತೇವೆ. ಶಿಗ್ಗಾಂವಿಯಲ್ಲಿ ಎಲ್ಲ ವರ್ಗದ ಜನತೆ ಮತಕೊಟ್ಟಿದ್ದಾರೆ. ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿದೆ. ಶಿಗ್ಗಾಂವಿ ಜನರ ನಂಬಿಕೆಗಳನ್ನು ಉಳಿಸಿಕೊಂಡು ಹೋಗುತ್ತೇವೆ. ನಮ್ಮ ಗ್ಯಾರಂಟಿಗಳನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ, ಮತ್ತೆ ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹಮದ್ ಮಾತನಾಡಿ, ಕ್ಷೇತ್ರದ ಜನತೆ 13 ಸಾವಿರ ಮತಗಳ ಅಂತರದಲ್ಲಿ ಪಠಾಣರನ್ನು ಗೆಲ್ಲಿಸಿದ್ದಾರೆ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದರು. 25 ವರ್ಷದಿಂದ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕೆಲಸ ಆಗಿಲ್ಲ, ಮೂರೂವರೆ ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಕೆಲಸವನ್ನು ಪಠಾಣ್ ಮಾಡಬೇಕು. ಇವರು ಕ್ಷೇತ್ರದಲ್ಲಿ ಏನಾದರೂ ಮಾಡುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯದಲ್ಲಿ ಬಿಜೆಪಿ ಸಾಧನೆ ಶೂನ್ಯ. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರ ಮನಸ್ಸು ಗೆದ್ದಿದ್ದೇವೆ. ಸ್ಲಂ ಬೋರ್ಡ್, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್‌ನಿಂದ ಬೊಮ್ಮಾಯಿ ಸರ್ಕಾರದಲ್ಲಿ ಒಂದೂ ಮನೆ ಕೊಟ್ಟಿಲ್ಲ, ಕೊಟ್ಟಿದ್ದನ್ನು ಸಾಬೀತು ಪಡಿಸಿದರೆ ನಾನು ಈಗಲೇ ರಾಜೀನಾಮೆ ನೀಡಲು ಸಿದ್ಧ. ನಾನು ಶಿಗ್ಗಾಂವಿ ಕ್ಷೇತ್ರಕ್ಕೆ 5-6 ಸಾವಿರ ಮನೆ ಕೊಡುತ್ತೇನೆ ಎಂದು ಹೇಳಿದರು.
ಸಮಾವೇಶದಲ್ಲಿ ಸಚಿವರಾದ ಸತೀಶ ಜಾರಕೊಹೊಳಿ, ಶಿವಾನಂದ ಪಾಟೀಲ, ವಿಪ ಮುಖ್ಯಸಚೇತಕ ಸಲೀಂ ಅಹ್ಮದ್, ಸಿಎಂ ಕಾರ್ಯದರ್ಶಿ ನಸೀರ್ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಗ್ಯಾರಂಟಿ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಶಾಸಕ ನೆಹರು ಓಲೇಕಾರ, ಆರ್. ಶಂಕರ್, ಅಶೋಕ ಪಟ್ಟದ ಇತರರು ಇದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ನಿರ್ವಹಿಸಿದರು.ಕಾಂಗ್ರೆಸ್ ಗೆಲ್ಲಿಸುವ ಮಾತು ಕೊಟ್ಟಂತೆ ನಾನು ನಡೆದುಕೊಂಡಿದ್ದೇನೆ. ಕಾಂಗ್ರೆಸ್ ಕೂಲಿ ಕಾರ್ಮಿಕರು, ಬಡವರ ಪರ ಇದೆ. ನಾನು ಕಾಂಗ್ರೆಸ್ ನಿಷ್ಠಾವಂತ. ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ಮಾತು ನನಗೆ ನೋವು ತಂದಿದೆ. ನನ್ನನ್ನು ಬೊಮ್ಮಾಯಿ ಹಿಡಿದುಕೊಳ್ಳಲು ಆಗಲ್ಲ, ನಾನು ಸ್ಪರ್ಧೆ ಮಾಡಿದ್ದಾಗ ಯಾವೊಬ್ಬ ನಾಯಕರು ಬಂದು ಪ್ರಚಾರ ಮಾಡಲಿಲ್ಲ, ಈಗ ಎಲ್ಲರೂ ಬಂದು ಕಾಂಗ್ರೆಸ್ ಗೆಲ್ಲಿಸಿದ್ದೀರಿ. ನನಗೆ ಬೆಂಬಲಿಸಿದರೆ ನಾನು ಗೆಲ್ಲುತ್ತಿದ್ದೆ. ನಾನು ಪಕ್ಷ ಕಟ್ಟಿಮನೆ ಹಾಳು ಮಾಡಿಕೊಂಡಿದ್ದೇನೆ. ಯಾವುದೇ ಷರತ್ತು ಹಾಕದೇ ನನ್ನ ನಾಮಪತ್ರ ಹಿಂಪಡೆದಿದ್ದೆ. ಪಕ್ಷದ ನಾಯಕರು ನನಗೆ ಹೆಸ್ಕಾಂ ಅಧ್ಯಕ್ಷರ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.
ನನಗೆ ಮೂರೂವರೆ ವರ್ಷ ಮಾತ್ರ ಕಾಲವಕಾಶ ಇದೆ. ನಾನು ಮಾತಿಗಿಂತ ಕೆಲಸಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. 2028ರಲ್ಲಿ ಕಾಂಗ್ರೆಸ್ ಗೆಲ್ಲಲು ನಮ್ಮ ಕ್ಷೇತ್ರದ ಜನರ ಬೇಡಿಕೆಗಳನ್ನು ಸಿಎಂ, ಡಿಸಿಎಂ, ಸಚಿವರು ಈಡೇರಿಸಬೇಕು. ನಾನು ಕೆಲಸ ಮಾಡುವ ಮೂಲಕ ಕ್ಷೇತ್ರದ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಹೇಳಿದರು.