ಸಾರಾಂಶ
ಸಿಂಧನೂರು: ರಾಜ್ಯ ಸರ್ಕಾರ 8 ದಿನಗಳಲ್ಲಿ ಜೋಳ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ ರಸ್ತಾ ರೋಖಾ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ಪಾಷಾ ದಿದ್ದಿಗಿ ಹೇಳಿದರು.
ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2024-25ನೇ ಸಾಲಿನಲ್ಲಿ 20 ಕ್ವಿಂಟಲ್ವರೆಗೆ ಖರೀದಿಸುವಂತೆ ಘೋಷಿಸಿದೆ.ಆದರೆ ಇದುವರೆಗೂ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ರೈತರ ನೆನಪಾಗುತ್ತದೆ. ಜಿಲ್ಲೆಯ 7 ಜನ ಶಾಸಕರು, ಸಂಸದರು, ಎಂಎಲ್ಸಿಗಳು ಜೋಳ ಖರೀದಿ ಆರಂಭವಾಗದಿರುವ ಕುರಿತು ಶಾಸನಸಭೆಯಲ್ಲಿ ಏಕೆ ಧ್ವನಿ ಎತ್ತಿಲ್ಲ ಎಂದು ದೂರಿದರು. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ರೈತರಿಂದ ನೋಂದಣಿ ಹಾಗೂ ಎಂಟು ದಿನಗಳಲ್ಲಿ ಜೋಳ ಖರೀದಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ತಾಲೂಕಿನ ಪೋತ್ನಾಳ ಕ್ರಾಸ್, ಅರಗಿನಮರ ಕ್ಯಾಂಪ್, ಕುನ್ನಟಗಿ ಕ್ರಾಸ್ ಹಾಗೂ ಶ್ರೀಪುರಂಜಂಕ್ಷನ್ನಲ್ಲಿ ರಸ್ತೆ ಸಂಚಾರ ತಡೆ ಚಳವಳಿ ನಡೆಸಲಾಗುವುದು. ಇದಕ್ಕೆ ಸ್ಪಂದನೆ ನೀಡದಿದ್ದರೆ ಸಿಂಧನೂರು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ, ಉಪಾಧ್ಯಕ್ಷ ಯೂಸೂಫ್ಸಾಬ್, ಮುಖಂಡರಾದ ಅಣ್ಣಪ್ಪ ಜಾಲಿಹಾಳ, ವೀರೇಶ ಮಡಿವಾಳ, ದೊಡ್ಡಪ್ಪ, ಇಸ್ಮಾಯಿಲ್ಸಾಬ್ ಇದ್ದರು.