ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ದಲಿತ ಸಂಘಟನೆಗಳ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕ ಇಕ್ಬಾಲ್ ಹುಸೇನ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜಿಲ್ಲೆಯ ದಲಿತ ಸಂಘಟನೆಗಳು ಶಾಸಕರ ಕಚೇರಿ ಎದುರು ಪೊರಕೆ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಕೊತ್ತಿಪುರ ಗೋವಿಂದರಾಜು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ದಲಿತ ಸಮುದಾಯದ ಅಭಿವೃದ್ಧಿ ಬಗ್ಗೆ ಮಾತನಾಡದೆ ದಲಿತ ಸಂಘಟನೆಗಳನ್ನು ಕುರಿತು ದಬ್ಬಾಳಿಕೆ ಚಾಳಿ ಬಿಡಬೇಕೆಂದು ಹೇಳಿ ಅವಮಾನ ಮಾಡಿದ್ದಾರೆ. ಶಾಸಕರು ಹಣ ಹಾಗೂ ಅಧಿಕಾರ ಮದದಿಂದ ಮಾತನಾಡುವುದು ಸರಿಯಲ್ಲ. ಎಲ್ಲಾ ದಲಿತ ಮುಖಂಡರನ್ನು ಹಣದಿಂದ ಖರೀದಿಸುವುದು ಸಾಧ್ಯವಿಲ್ಲ. ದಲಿತ ಮುಖಂಡರು ತಮ್ಮ ಸ್ವಂತ ಹಣದಿಂದ ಮಾಡಿದ ಸ್ವಾಭಿಮಾನದ ಭೀಮೋತ್ಸವವನ್ನು ಸಹಿಸದೆ ಟೀಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ದಲಿತ ಸಂಘಟನೆಗಳ ನಾಯಕರು ತಮ್ಮ ಜೀವನವನ್ನೇ ಸಮಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಎಂದೂ ಹೋರಾಟ ಮಾಡಿಲ್ಲ. ಈ ರೀತಿ ಮಾತನಾಡಲು ನಿಮಗೆ ನಾಚಿಕೆ ಆಗಬೇಕು. ನಿಮ್ಮ ಹೇಳಿಕೆ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತೇವೆ. ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಿಸುತ್ತೇವೆ. ಇನ್ನು ಮುಂದಾದರೂ ದಲಿತ ಸಂಘಟನೆಗಳನ್ನು ಕೀಳಾಗಿ ಕಾಣುವ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಹೇಳಿದರು.ದಲಿತ ಮುಖಂಡ ಮತ್ತಿಕೆರೆ ಹನುಮಂತಯ್ಯ ಮಾತನಾಡಿ, ಶಾಸಕರ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಅವರು ಶಾಸಕರಾದಾಗ ಸಂತಸ ಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೇನೆ. ಆದರೆ, ಅಧಿಕಾರಿಗಳನ್ನು ಸಮರ್ಥನೆ ಮಾಡಿಕೊಳ್ಳಲು ಹೋಗಿ ದಲಿತ ಸಂಘಟನೆಗಳ ಟೀಕೆ ಮಾಡಿರುವುದು ಸರಿಯಲ್ಲ. ಶಾಸಕರು ಪ್ರಜ್ಞಾವಂತರಾಗಿ ಮಾತನಾಡಬೇಕು ಎಂದು ತಿಳಿಸಿದರು.
ಜನರ ಕೆಲಸ ಮಾಡದ ಅಧಿಕಾರಿಗಳನ್ನು ಪ್ರಶ್ನೆ ಮಾಡುವುದು ನಿಮಗೆ ದೌರ್ಜನ್ಯದ ರೀತಿ ಕಂಡರೆ, ಅದು ನಿಮ್ಮ ದೌರ್ಬಲ್ಯ ತೋರಿಸುತ್ತದೆ. ದಲಿತರು ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸುವಲ್ಲಿ ನೀವು ವಿಫಲರಾಗಿದ್ದೀರಿ. ಈ ಕೂಡಲೆ ದಲಿತ ಸಂಘಟನೆಗಳ ಕ್ಷಮೆ ಕೇಳಿ ತಮ್ಮ ನಡೆ ತಿದ್ದುಕೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ವರಿಷ್ಠರು ಹಾಗೂ ಸರ್ಕಾರದಲ್ಲಿರುವ ದಲಿತ ಸಮುದಾಯದ ಸಚಿವರಿಗೆ ದೂರು ಸಲ್ಲಿಸುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ್, ದಿನೇಶ್, ಅಂಜನಾಪುರ ವಾಸು, ಲೋಕೇಶ್ ಮೌರ್ಯ, ಕೂಡ್ಲೂರು ವಿನಯ್, ಪುನೀತ್ ರಾಜ್, ಸುರೇಶ್, ಸಿದ್ದರಾಮು ನೀಲಸಂದ್ರ, ಶಂಕರ್ ಮೌರ್ಯ, ವಿಜಯಪುರ ಅಪ್ಪಾಜಿ, ಪರಮೇಶ್, ಗೋವಿಂದಯ್ಯ, ಪ್ರಸಾದ್, ಗಂಗಾಧರ್ ಲಕ್ಕಸಂದ್ರ, ಸಿ. ಲೋಕೇಶ್, ಗೋಪಿ ಜಯಪುರ, ಇಟ್ಟಮಡು ಶ್ರೀಧರ್ ಇತರರಿದ್ದರು.