ಸಾರಾಂಶ
ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಬರಬೇಕು ಅಂತ ಪ್ಲಾನ್ ಮಾಡಿದ್ರು, ಆದರೆ ಅವರ ಹಿಂದೆ ಶಾಸಕರು ಇಲ್ಲ ಅಂತ ಅವರನ್ನು ಪಕ್ಷಕ್ಕೆ ಕರ್ಕೊಂಡಿಲ್ಲ, ಡಿಕೆಶಿ ಬಳಿ ಕೇವಲ 10ರಿಂದ 12 ಜನ ಮಾತ್ರ ಇದ್ದಾರೆ.
ಕಲಬುರಗಿ: ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಬರಬೇಕು ಅಂತ ಪ್ಲಾನ್ ಮಾಡಿದ್ರು, ಆದರೆ ಅವರ ಹಿಂದೆ ಶಾಸಕರು ಇಲ್ಲ ಅಂತ ಅವರನ್ನು ಪಕ್ಷಕ್ಕೆ ಕರ್ಕೊಂಡಿಲ್ಲ, ಡಿಕೆಶಿ ಬಳಿ ಕೇವಲ 10ರಿಂದ 12 ಜನ ಮಾತ್ರ ಇದ್ದಾರೆ. ಹೀಗಾಗಿ ಅವರನ್ನ ಪಕ್ಷಕ್ಕೆ ನಮ್ಮ ದಿಲ್ಲಿ ನಾಯಕರು ಸೇರಿಸಿಕೊಂಡಿಲ್ಲ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯಾತ್ನಾಳ್ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಸಂಘ ಪರಿವಾರದ ಹಾಡು ಹೇಳುವ ಬದಲು ಅವರು ಇಟಲಿ ಮಾತೆ ಬಗ್ಗೆ ಹೇಳಿದ್ರೆ ಅವರು ಸಿಎಂ ಆಗ್ತಾ ಇದ್ರು ಎಂದು ಲೇವಡಿ ಮಾಡಿದರು.ಡಿ.ಕೆ.ಶಿವಕುಮಾರ್ ನಮೋ ವತ್ಸಲೇ ಅಂತ ನಾಟಕ ಮಾಡೋಕೆ ಹೋಗಿದ್ರು, ಯಾಕೆ ನಾಟಕ ಮಾಡ್ತಾರೆ ಅಂದ್ರೆ ಒಂದು ಕಾಲು ಬಿಜೆಪಿ ಕಡೆನೂ ಇಟ್ಟಿದ್ದಾರೆ. ಬಿಜೆಪಿ ಜೊತೆಗೆ ಡಿಕೆಶಿ ಚರ್ಚೆ ಮಾಡಿದ್ದಾರೆ. ಡಿಕೆಶಿ ಹಿಂದೆ ಶಾಸಕರು ಇಲ್ಲ ಅಂತ ಬಿಟ್ಟಿದ್ದಾರೆ. ದೆಹಲಿಯಲ್ಲಿ ಚರ್ಚೆ ಆಗಿದೆ. ಡಿಕೆಶಿ ಅವರದ್ದು ಮತ್ತು ನಮ್ಮ ಮಹಾಮಹಿಮ ರಾಜ್ಯಾಧ್ಯಕ್ಷನ ನಡುವೆ ಮಾತಾಗಿದೆ ಎಂದು ಹೇಳಿದರು.
60-70 ಕಾಂಗ್ರೆಸ್ ಶಾಸಕರನ್ನು ತೊಗೊಂಡು ಬರುತ್ತೇವೆ, ನಮಸ್ತೆ ಸದಾ ವತ್ಸಲೆ ಹಾಡುತ್ತೇವೆ ಅಂತ ಡಿಕೆಶಿ ಹಾಡಿದ್ದಾರೆ, ಆಮೇಲೆ ಡಿಕೆಶಿ ಹಿಂದೆ 12-13 ಜನ ಶಾಸಕರೂ ಇಲ್ಲ ಅಂತ ಗುಪ್ತಚರ ಮಾಹಿತಿ ಹೋಗಿದೆ. ಸಿದ್ದರಾಮಯ್ಯ ಕಡೆ ಶಾಸಕರು ಹೆಚ್ಚಿಗೆ ಇದ್ದಾರೆ ಅಂತ ಗೊತ್ತಾದಾಗ ಪ್ಲಾನ್ ಠುಸ್ ಆಗಿದೆ ಎಂದು ಯಾತ್ನಾಳ್ ತಿಳಿಸಿದರು.ಶಾಸಕರ ಬಲಾಬಲ ಬಗ್ಗೆ ಹೈಕಮಾಂಡ್ ತಮ್ಮನ್ನೂ ಸಂಪರ್ಕಿಸಿತ್ತು, ಡಿಕೆಶಿ ಶಿವಕುಮಾರ್ ಜೊತೆ ಎಷ್ಟು ಜನ ಇದ್ದಾರೆ ? ಅಂತ ಕೇಳಿದ್ರು, 10-12 ಜನ ಇದ್ದಾರೆ, ಬಿಜೆಪಿ ಜೊತೆಗೆ ಅವರು ಯಾರು ಬರಲ್ಲ ಅಂತ ಹೇಳಿದ್ದೆ.
ಡಿಕೆಶಿ ಸಿಎಂ, ವಿಜಯೇಂದ್ರ ಡೆಪ್ಯೂಟಿ ಸಿಎಂ ಅಂತೆಲ್ಲ ಪ್ಲ್ಯಾನ್ ಆಗಿತ್ತು. ಇವರು ಇಬ್ಬರು ಏನಾದ್ರು ಕೂಡಿದ್ರೆ ರಾಜ್ಯವನ್ನೇ ಮಾರಿ ಬಿಡ್ತಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು. ಡಿಕೆಶಿ ಒಬ್ಬ ಭ್ರಷ್ಟ ಮತ್ತು ಬಿಜೆಪಿಯಲ್ಲೂ ಒಬ್ಬ ಭ್ರಷ್ಟ ಇದ್ದಾನೆ. ಇಬ್ಬರು ಕೂಡಿದ್ರೆ ಕರ್ನಾಟಕದ ಕಥೆ ಅಷ್ಟೇ ಎಂದು ಒಗಟಾಗಿ ಹೇಳಿದರು.
ಕರ್ನಾಟಕದಲ್ಲಿ ಆಡಳಿತ ಅನ್ನೋದು ಇಲ್ಲ, ಬರೀ ಭ್ರಷ್ಟಾಚಾರ ಮಾಡ್ತಿದೆ. ಈ ಸರ್ಕಾರ ಮುದ್ರಾಂಕ ನೋಂದಣಿಯ ಟ್ಯಾಕ್ಸ್ ಕೂಡ ಹೆಚ್ಚಳ ಮಾಡಿದೆ. ದುರ್ದೈವ ಅಂದ್ರೆ ಬಿಜೆಪಿಯ ಕೆಲವರು ಕಾಂಗ್ರೆಸ್ ನವರ ಜೊತೆ ಕೈಜೊಡಿಸಿದ್ದಾರೆ. ಅವರ ಕ್ಯಾಸೆಟ್ ಇವರ ಬಳಿ ಇವೇ, ಇವರ ಕ್ಯಾಸೆಟ್ ಅವರ ಬಳಿ ಇವೆ. ವಿಜಯೇಂದ್ರ ಅಂತು ತುಟಿನೆ ಬಿಚ್ವಲ್ಲ. ಇದೆಲ್ಲಾ ನೋಡಿದ್ರೆ ಹೊಂದಾಣಿಕೆ ರಾಜಕಾರಣ ಇದೆ ಅನಿಸಲ್ಲವಾ ? ಎಂದು ಪ್ರಶ್ನಿಸಿದರು.
ಮುಸ್ಲಿಂ ಯಾರಾದ್ರು ಮೂರ್ತಿ ಪೂಜೆ ಮಾಡ್ತಾರಾ?: ಯಾತ್ನಾಳ್
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ವಿಚಾರವಾಗಿ ಹೇಳಿಕೆ ನೀಡಿರುವ ಶಾಸಕ ಬಸವನಗೌಡ ಪಾಟೀಲ್ ಯಾತ್ನಾಳ್ ಅವರು, ಮುಸ್ಲಿಂ ಯಾರಾದ್ರು ಮೂರ್ತಿ ಪೂಜೆ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡಿ ದೇವಿ ಪೂಜೆ ಮತ್ತು ಪುಷ್ಪಾರ್ಚನೆ. ಇದು ಹಿಂದೂ, ಸನಾತನ ಧರ್ಮದ ಪರಂಪರೆ. ಸಾಕಷ್ಟು ಜನ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕನ್ನಡ ಧ್ವಜ ವಿರೋಧ ಮಾಡಿದ್ರು. ಭುವನೇಶ್ವರಿ ಮೂರ್ತಿ ವಿರೋಧ ಮಾಡಿದ್ರು. ಇವತ್ತು ಹಿಂದೂಗಳ ದೇವತೆಯಾದ ಚಾಮುಂಡೇಶ್ವರಿಯಲ್ಲಿ ಪೂಜೆ ಮಾಡ್ತಾರೆ, ಮುಸ್ಲಿಂ ಯಾರಾದ್ರು ಮೂರ್ತಿ ಪೂಜೆ ಮಾಡ್ತಾರಾ ? ಎಂದು ಕೇಳಿದರು.
ಸಿದ್ದರಾಮಯ್ಯ ಸರ್ಕಾರದ್ದು ಅತಿಯಾಯ್ತು, ಎಲ್ಲಾ ಕಡೆ ತುಷ್ಟೀಕರಣ ಹಿಂದೂಗಳು ಓಟ್ ಹಾಕೆ ಇಲ್ಲವಾ ? ಬರೀ ಮುಸ್ಲಿಮರೇ ಓಟ್ ಹಾಕಿದ್ರಾ ? ನಮ್ಮ ಹಿಂದಿನ ಪಾರ್ಟಿ ಅವರು ಕಾಂಪ್ರಮೈಜ್ ರಾಜಕಾರಣ ಮಾಡ್ತಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಹಿಂದೂಗಳು ಪಾಠ ಕಲಿಸ್ತಾರೆ. ರಾಜ್ಯದಲ್ಲಿ ಇವತ್ತು ಹಿಂದೂ ಧರ್ಮವನ್ನು ತುಳಿಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸದಾ ವತ್ಸಲೇ ಸ್ಲೋಗನ್ ಹಾಡಿದ್ದಾರೆ, ಹೊರಗಡೆ ಬಂದು ಡಿಕೆಶಿ ಕ್ಷಮೆ ಕೇಳಿದ್ದಾರೆ, ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಏನಾಯ್ತು ? ಯಾವುದಾದ್ರೂ ಬುರಿಡೆ ಸಿಕ್ಕಿವೆಯಾ ? ಏನ್ ಸಿಕ್ಕಿಲ್ಲ.. ಬರೀ ಪಾನ್ ಪರಾಕ್ ಚೀಟಿ ಸಿಕ್ಕಿವೆ ಅಷ್ಟೇ ಎಂದರು.
ಪಾಪ ಸಿದ್ರಾಮಯ್ಯ ಅವರು, ಎಸ್‌ಐಟಿ ಮಾಡಿದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒತ್ತಾಯಕ್ಕೆ. ಹಿಂದೂ ಧರ್ಮ, ದೇವಾಲಯಗಳನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಯಾತ್ನಾಳ್ ಆರೋಪಿಸಿದರು.