ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಗುಣಮಟ್ಟವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಮಧ್ಯರಾತ್ರಿ ಪರಿಶೀಲನೆ ನಡೆಸಿದರು.
ಯಲಹಂಕ, ಬಾಗಲೂರು ರಸ್ತೆ, ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಸ್ಯಾಂಕಿ ರಸ್ತೆ ಸೇರಿದಂತೆ ಹಲವೆಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಸ್ತೆ ಗುಂಡಿ ಕುರಿತಂತೆ ಸಾರ್ವಜನಿಕರು, ಶಾಸಕರು ದೂರು ನೀಡುತ್ತಿದ್ದರು. ಅದರಂತೆ ಗುಂಡಿ ಮುಚ್ಚಲಾಗುತ್ತಿದೆ. ಅಲ್ಲದೆ ರಸ್ತೆ ಗುಂಡಿ ಕುರಿತಂತೆ ಸಾರ್ವಜನಿಕರು ದೂರು ನೀಡಲು ಫಿಕ್ಸ್ ಮೈ ಸ್ಟ್ರೀಟ್ ಹೆಸರಿನಲ್ಲಿ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಅದರಲ್ಲಿ ರಸ್ತೆ ಗುಂಡಿಗಳ ಫೋಟೋ ಸಹಿತ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರ ಆಧಾರದ ಮೇಲೆ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ ಎಂದರು.ನಗರದಲ್ಲಿ 5 ಸಾವಿರಕ್ಕೂ ಹೆಚ್ಚಿನ ಗುಂಡಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಮೊದಲಿಗೆ 4,400 ಗುಂಡಿ ಮುಚ್ಚಲು ಸೂಚಿಸಲಾಗಿತ್ತು. ಅದರಂತೆ ಕಳೆದ ನಾಲ್ಕೈದು ದಿನಗಳಲ್ಲಿ 2200 ಗುಂಡಿಗಳನ್ನು ಮುಚ್ಚಲಾಗಿದೆ. ಹಾಟ್ ಮಿಕ್ಸ್, ಕೋಲ್ಡ್ ಮಿಕ್ಸ್ ಸೇರಿದಂತೆ ಗುಂಡಿ ಮುಚ್ಚಲು ಎಲ್ಲ ಅವಕಾಶ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಂಡರು ಮಳೆ, ವಾಹನಗಳ ಹೆಚ್ಚಿನ ಓಡಾಟದಿಂದಾಗಿ ಗುಂಡಿ ಬೀಳುತ್ತವೆ. ಅದಕ್ಕೆ ಪರಿಹಾರ ಎನ್ನುವಂತೆ ಎಲ್ಲೆಡೆ ಆದ್ಯತೆ ಮೇರೆಗೆ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ. ಅಲ್ಲದೆ ಗುಂಡಿಗಳು ಅಪಘಾತ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪೊಲೀಸರಿಗೂ ರಸ್ತೆ ಗುಂಡಿ ಪತ್ತೆ ಮಾಡಿ ಪಟ್ಟಿ ನೀಡುವಂತೆ ತಿಳಿಸಲಾಗಿದೆ ಎಂದರು.