ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಮುಂದುವರೆದಿದ್ದು, ಸಿಎಂ ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಷಡ್ಯಂತ್ರ ನಡೆದಿದೆ ಎಂದು ಮಾಜಿ ಸಿಎಂ, ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ದೂರಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಯಾರಾದರೂ ಮಹಾರಾಷ್ಟ್ರದ ಏಕನಾಥ ಶಿಂಧೆ ಆಗುವ ಸಾಧ್ಯತೆಗಳಿವೆ. ಈ ಸಂಬಂಧ ಬಿಜೆಪಿಯಿಂದ ಆಪರೇಷನ್ ಕಮಲ ಸೇರಿದಂತೆ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ನಾವೇನೂ ಅರಿಷಿನ, ಕುಂಕುಮ ಕೊಟ್ಟಿಲ್ಲ. ರತ್ನಗಂಬಳಿಯನ್ನೂ ಹಾಕಿಲ್ಲ. ನಾವ್ಯಾರೂ ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆ ಕೊಟ್ಟಿಲ್ಲ ಎಂದರು.ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಆರ್‌ಎಸ್‌ಎಸ್ ಬಗ್ಗೆ ವಿಶೇಷವಾದ ಮಮತೆ ವ್ಯಕ್ತಪಡಿಸಿ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ಶಿವಕುಮಾರ ಅವರು ತಮ್ಮ ಮನೋಭಾವನೆಯನ್ನು ಮನಸ್ಸಿನ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಪಕ್ಷದವರೇ ವಿರೋಧ ವ್ಯಕ್ತಪಡಿಸಿದ್ದರಿಂದ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ, ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿಲ್ಲ. ಒಂದು ಸಲ ಮಾತನಾಡಿದರೇ ಮುಗಿದುಹೋಯಿತು. ಕಾಂಗ್ರೆಸ್ ಜನಪ್ರತಿನಿಧಿಗಳಲ್ಲಿ ಆರ್‌ಎಸ್‌ಎಸ್ ಬಗ್ಗೆ ಒಳ್ಳೆಯ ಭಾವನೆ ಇದೆ ಎಂದರು.ಆರ್‌ಎಸ್‌ಎಸ್ ಭಾರತದ ಸಾಂಸ್ಕೃತಿಕ ಸಂಸ್ಥೆ. ಹಿಂದೂ ಧರ್ಮ, ತತ್ವಗಳನ್ನು ಉಳಿಸಿಕೊಂಡು ಬರುತ್ತದೆ. ಇದು ಯಾವುದೇ ಧರ್ಮ, ಜಾತಿ ವಿರುದ್ಧವಲ್ಲ. ದೇಶದ ಸಂಸ್ಕೃತಿ, ಧರ್ಮವನ್ನು ಉಳಿಸುವ ಸಂಸ್ಥೆಯಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ಕಾಂಗ್ರೆಸ್ ಉದ್ದಾರ ಆಗಲ್ಲ. ಅವನತಿ ಆಗುತ್ತದೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತದೆ. ಅವರ ಉದ್ದಾರ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು ಎಲ್ಲ ಸಮುದಾಯದ ಜನತೆಗೂ ದೊರೆಯುತ್ತಿವೆ ಎಂದರು.ಧರ್ಮಸ್ಥಳದ ಬಗ್ಗೆ ಅಪಪ್ರಚಾರ:
ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಇದರಲ್ಲಿ ಷಡ್ಯಂತ್ರ ಮಾಡಿದ್ದಾರೆ ಎನ್ನುವುದು ಬೇಡ ಎಂದರು.ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಬಹಳ ಆಗಿತ್ತು. ಬುರಡೆ ಅದು ಸಿಗದಿದ್ದಾಗ ತನಿಖೆ ನಿಲ್ಲಿಸುವುದಾಗಿ ಸರ್ಕಾರ ಹೇಳಿತ್ತು. ಆಗ ಬೆಂಗಳೂರಿನಲ್ಲಿ ಎಡಪಂಥೀಯರು ಸಭೆ ಸೇರಿದರು. ಇಲ್ಲಿ ಸಭೆ ಸೇರಿದವರೆಲ್ಲರೂ ಸಿದ್ದರಾಮಯ್ಯ ಆಪ್ತರು. ಇದರ ಮೇಲೆ ಅರ್ಥ ಮಾಡಿಕೊಳ್ಳಬೇಕು. ಹಿಂದು ಪರಂಪರೆಗೆ ಕಪ್ಪು ಮಸಿ ಬಳಿ ಬಡೆಯುವ ಪ್ರಯತ್ನ ನಡೆಯಿತು. ಧರ್ಮಾಧಿಕಾರಿ ಹಾಗೂ ಆ ಕ್ಷೇತ್ರದ ಬಗ್ಗೆ ಧಕ್ಕೆ ತರುವ ಸಲುವಾಗಿ ಹೀಗೆ ಮಾಡಿದರು. ಅವರೇ ಎಸ್ಐಟಿ ರಚನೆ ಮಾಡಿ ಕೈ ಚಲ್ಲಿ ಕೂತಿದ್ದಾರೆ. ದೂರು ಕೊಟ್ಟವರೇ ಆರೋಪಿಗಳಾಗಿದ್ದಾರೆ ಎಂದು ಆರೋಪಿಸಿದರು.ಯಾರೋ ಬಂದು ಹೇಳಿದರೂ ಎಂದು ಎಸ್‌ಐಟಿ ಮಾಡುವುದು. ಕೋಟ್ಯಂತರ ಖರ್ಚು ಮಾಡುವುದರಿಂದ ಏನಾಯಿತು. ಯಾವ ರಿಸಲ್ಟ್ ಕೂಡ ಬರಲಿಲ್ಲ ಎಂದು ತಿಳಿಸಿದರು.