ಧರ್ಮಸ್ಥಳ ಕೇಸ್‌ಗೆ ಬಿಜೆಪಿ ಗುಂಪು ಕಲಹ ಕಾರಣ : ಡಿ.ಕೆ.ಶಿವಕುಮಾರ್‌

| N/A | Published : Aug 27 2025, 01:00 AM IST / Updated: Aug 27 2025, 03:49 AM IST

ಧರ್ಮಸ್ಥಳ ಕೇಸ್‌ಗೆ ಬಿಜೆಪಿ ಗುಂಪು ಕಲಹ ಕಾರಣ : ಡಿ.ಕೆ.ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ಮೃತದೇಹಗಳನ್ನು ಹೂತ ಆರೋಪ ಪ್ರಕರಣ ಬಿಜೆಪಿಯವರೇ ಹೆಣೆದ ಷಡ್ಯಂತ್ರವಾಗಿದ್ದು, ಅವರ ಪಕ್ಷದ ಎರಡು ಗುಂಪುಗಳ ನಡುವಿನ ಆಂತರಿಕ ಜಗಳದಲ್ಲಿ ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

 ಬೆಂಗಳೂರು :  ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ಮೃತದೇಹಗಳನ್ನು ಹೂತ ಆರೋಪ ಪ್ರಕರಣ ಬಿಜೆಪಿಯವರೇ ಹೆಣೆದ ಷಡ್ಯಂತ್ರವಾಗಿದ್ದು, ಅವರ ಪಕ್ಷದ ಎರಡು ಗುಂಪುಗಳ ನಡುವಿನ ಆಂತರಿಕ ಜಗಳದಲ್ಲಿ ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಲು ಆಗ್ರಹಿಸಿ ಸೆ.1ರಂದು ಬಿಜೆಪಿಯವರು ಧರ್ಮಸ್ಥಳದಲ್ಲೇ ಧರ್ಮಜಾಗೃತಿ ಸಭೆ ಆಯೋಜಿಸಿರುವ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರದ ಕ್ರಮವನ್ನು ಅವರ ಪಕ್ಷದ ನಾಯಕರೇ ಸ್ವಾಗತಿಸಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದವರೂ ಸ್ವಾಗತಿಸಿದ್ದಾರೆ ಎಂದರು.

ನಾವು ಸತ್ಯ ಹೊರತರಲು ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೆ. ಈಗ ಧರ್ಮಸ್ಥಳವನ್ನು ಬಿಜೆಪಿಯವರು ಅಶುದ್ಧ ಮಾಡಲು ಹೊರಟಿದ್ದಾರೆ, ಇದು ಬಿಜೆಪಿಯ ಎರಡು ಬಣಗಳ ಆಂತರಿಕ ಕಲಹದಿಂದ ನಡೆದ ಷಡ್ಯಂತ್ರ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ನಾನು ಬಾಯಿಮುಚ್ಚಿಕೊಂಡು ಸುಮ್ಮನೆ ಇದ್ದೇನೆ. ಇದನ್ನು ಎಲ್ಲಿ ಹೊರಗೆಳೆಯುತ್ತೆವೆಯೋ ಎಂದು ಅದನ್ನು ಮುಚ್ಚಿಹಾಕಲು ಧರ್ಮಸಭೆ ಮಾಡಲು ಎಂದು ಹೊರಟಿದ್ದಾರೆ ಎಂದು ಟೀಕಿಸಿದ ಅವರು, ಇಂತಹ ರಾಜಕೀಯ ಕುತಂತ್ರಕ್ಕೆ ತಾವು, ಧರ್ಮ ಕ್ಷೇತ್ರವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ನಾನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡುತ್ತೇನೆ ಎಂದರು.

ಯಾಕೆ ಆರೋಪ?:

ಪ್ರಕರಣದಲ್ಲಿ ಯಾರ್‍ಯಾರ ಬಂಧನ ಆಗಿದೆ? ಬಂಧನ ಆದವರು ಯಾವ ಪಕ್ಷದವರು? ಅವರು ಯಾರ್‍ಯಾರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಅವರು(ಬಂಧನ ಆದವರು) ನಮ್ಮ ಶಾಸಕ ಅಂತ ಹೇಳಿಕೆ ನೀಡಿದ್ದಾರೆ. ಅವರ ಶಾಸಕನ ಬಂಧನವೂ ಆಗಿದೆ. ಆ ಶಾಸಕ ಏನೇನೋ ಹೇಳಿದ್ದಾರೆ. ಈ ಎಲ್ಲದರ ಆಧಾರದಲ್ಲಿ ಇದು ಬಿಜೆಪಿಯವರ ಷಡ್ಯಂತ್ರ ಎಂದು ಹೇಳುತ್ತಿದ್ದೇನೆ. ಧರ್ಮಸ್ಥಳದ ಮೇಲೆ ಮಸಿ ಬಳಿಯಲು ಪ್ರಯತ್ನ ಮಾಡಿ ಷಡ್ಯಂತ್ರ ರೂಪಿಸಿದ್ದು ಅವರ ಪಕ್ಷದವರು ಮತ್ತು ಬಿಜೆಪಿಯ ಅಂಗವಾಗಿರುವವರು. ಬಿಜೆಪಿಯವರು ಧರ್ಮದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಧರ್ಮಸ್ಥಳದಲ್ಲಿ ಸೆ.1ರಂದು ಧರ್ಮಜಾಗೃತಿ ಸಭೆ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಧರ್ಮಸ್ಥಳದಲ್ಲೇ ಏಕೆ ಬೆಂಗಳೂರಲ್ಲೇ ಮಾಡಿ, ಯಾರು ಬೇಡ ಅಂತಾರೆ? ಭಕ್ತಾದಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ಅವರು ಹೇಳಿದ ತಕ್ಷಣ ಭಕ್ತಾದಿಗಳು ಬಸ್ಸಲ್ಲಿ ಬರ್ತಾರಾ? ಧರ್ಮಸ್ಥಳದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಅದಕ್ಕೆ ಲೋಪ ಬರದಿರಲಿ. ಬಿಜೆಪಿಯವರ ಸಭೆ ರಾಜಕೀಯದ ಸಭೆ, ಧರ್ಮ ಉಳಿಸಲು ಅಲ್ಲ. ಧರ್ಮದ ಹೆಸರಲ್ಲಿ ಅಶಾಂತಿ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಬಲಿಯಾಗಬಾರದು ಎಂದು ಹೇಳಿದರು.

ಬಾಯಿ ಮುಚ್ಚಿಕೊಂಡು

ನಾವು ಸುಮ್ಮನಿದ್ದೇವೆ

ಇದು ಬಿಜೆಪಿಯ ಎರಡು ಬಣಗಳ ಆಂತರಿಕ ಕಲಹದಿಂದ ನಡೆದ ಷಡ್ಯಂತ್ರ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ನಾನು ಬಾಯಿಮುಚ್ಚಿಕೊಂಡು ಸುಮ್ಮನೆ ಇದ್ದೇನೆ. ಇದನ್ನು ಎಲ್ಲಿ ಹೊರಗೆಳೆಯುತ್ತೆವೆಯೋ ಎಂದು ಅದನ್ನು ಮುಚ್ಚಿಹಾಕಲು ಧರ್ಮಸಭೆ ಮಾಡಲು ಎಂದು ಹೊರಟಿದ್ದಾರೆ.

- ಡಿ.ಕೆ. ಶಿವಕುಮಾರ್‌, ಡಿಸಿಎಂ

Read more Articles on