ಸಾರಾಂಶ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಪೊಲೀಸ್ ಇಲಾಖೆ ಕಾರ್ಯಾಚರಣೆ ವೇಳೆ ಕಾಲೇಜು ಕ್ಯಾಂಪಸ್, ಹಾಸ್ಟೆಲ್‍ಗಳಲ್ಲಿ ಮಾದಕ ವಸ್ತುಗಳ ಜಾಲ ಪತ್ತೆಯಾದರೆ ಪ್ರಾಂಶುಪಾಲರು ಹಾಗೂ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಚ್ಚರಿಸಿದ್ದಾರೆ.ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಮಾದಕ ವಸ್ತುಗಳ ನಿಯಂತ್ರಣ ಕುರಿತಾದ ಜಿಲ್ಲಾ ಮಟ್ಟದ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ, ಹಾಸ್ಟೆಲ್‍ಗೆ ಆಗಾಗ್ಗೆ ಬಂದು ಹೋಗುವ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕು. ಸಿಸಿ ಕ್ಯಾಮರಾ ಅಳವಡಿಸಿ, ಪರಿಶೀಲಿಸುವ ಕಾರ್ಯ ಆಗಬೇಕು. ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಆಂದೋಲನ ಮಾದರಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಬೇಕು ಎಂದರು.
ಯುವ ಜನರನ್ನು ಗುರಿಯಾಗಿಸಿಕೊಂಡು ನಗರ ಪ್ರದೇಶಗಳಲ್ಲಿರುವ ಇಂಜಿನಿಯರಿಂಗ್, ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ ಹಾಗೂ ಮೆಡಿಕಲ್ ಕಾಲೇಜು ಕ್ಯಾಂಪಸ್ ಸುತ್ತಮುತ್ತ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಮಾರಾಟ ನಡೆಯುವ ಸಂಭವ ಹೆಚ್ಚಿರುತ್ತದೆ. ಈ ಬಗ್ಗೆ ತೀವ್ರ ನಿಗಾ ವಹಿಸಬೇಕು. ಹಾಸ್ಟೆಲ್‍ಗಳಲ್ಲಿಯೂ ಮಾದಕ ವಸ್ತುಗಳ ಬಗ್ಗೆ ಆಗಾಗ್ಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು ಎಂದರು.ಮಾದಕ ವಸ್ತುಗಳ ಚಟುವಟಿಕೆ ಬಗ್ಗೆ ರಾಜ್ಯ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ. ಮುಖ್ಯಮಂತ್ರಿ ಹಾಗೂ ಗೃಹಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆ ತುಂಬಾ ಕಠಿಣವಾಗಿದೆ. ಮಾದಕ ವಸ್ತುಗಳ ಸೇವನೆ ಸಾಬೀತು ಆದರೆ ನೇರವಾಗಿ ಎಫ್‌ಐಆರ್ ದಾಖಲಿಸಲಾಗುವುದು. ಕಾಯ್ದೆಯ ಅಡಿ ಮಾದಕ ವಸ್ತುಗಳ ಸೇವನೆ, ಮಾರಾಟ, ಸಾಗಾಣಿಕೆ ಹಾಗೂ ಮಾದಕ ವಸ್ತುಗಳ ಖರೀದಿಸಲು ಹಣ ಸಹಾಯ ನೀಡಿದವರ ಮೇಲೂ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿ ಪಡಿಸಲು ಅವಕಾಶವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳ ಹೊರತಾಗಿ, ಟೈಯರ್ ಪಂಚರ್ ಹಾಕಲು ಬಳಸುವ ಸಲೂಷನ್, ವೈಟ್ನರ್, ಹೆಚ್ಚಿನ ಡೋಸೆಜ್ ಇರುವ ಕೆಮ್ಮಿನ ಔಷಧಿಗಳನ್ನು ಹದಿ ಹರೆಯದವರು ಬಳಸುತ್ತಿರುವುದಾಗಿ ವರದಿಯಿದೆ. ಈ ಕುರಿತು ಶಾಲಾ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಪೋಷಕರು ಹೆಚ್ಚಿನ ನಿಗಾ ವಹಿಸಬೇಕು. ಗಾಂಜಾ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಜಿಲ್ಲೆಗೆ ಸರಬರಾಜು ಆಗುತ್ತಿರುವ ಕುರಿತು ಮಾಹಿತಿಗಳು ಇವೆ. ವಿದ್ಯಾರ್ಥಿಗಳು ಈ ವಿಷವರ್ತುಲಕ್ಕೆ ಸಿಕ್ಕಿಬೀಳುತ್ತಿದ್ದಾರೆ ಎಂದರು.ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಹಿರಿಯೂರು ಬಬ್ಬೂರು ಪಾರಂನಲ್ಲಿ ಕೃಷಿ ಅಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆ ಮಾಡುವವರಿಗೆ ಗಾಂಜಾ ಬೆಳೆ ಗುರುತಿಸಿ, ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಕುರಿತು ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಗಾಂಜಾ ಬೆಳೆಯನ್ನು ಸಾಮಾನ್ಯವಾಗಿ ಬೋರ್ ವೆಲ್ ಸೌಲಭ್ಯ ಇರುವ ಜಮೀನುಗಳಲ್ಲಿ ಬೆಳೆಯುವ ಸಂಭವ ಇರುತ್ತದೆ. ಆದ್ದರಿಂದ ಕೃಷಿ ಅಧಿಕಾರಿಗಳು ಇಂತಹ ಜಮೀನುಗಳಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲಾ ಔಷಧಿ ಅಂಗಡಿಗಳಲ್ಲಿ ವೈದ್ಯರ ಶಿಫಾರಸ್ಸು ಇಲ್ಲದೆ, ಕೆಲವು ರಾಸಾಯನಿಕ ಸಂಯೋಜನೆ ಇರುವ ಕೆಮ್ಮಿನ ಔಷಧಿಗಳನ್ನು ಮಾರಾಟ ಮಾಡಬಾರದು. ಕಾಲಕಾಲಕ್ಕೆ ಔಷಧಿ ಅಂಗಡಿಗಳ ಸ್ಟಾಕ್ ಬುಕ್ ಪರಿಶೀಲನೆ ನಡೆಸಬೇಕು. ಎಲ್ಲಾ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಲು ಸೂಚನೆ ನೀಡುವಂತೆ ಸಹಾಯಕ ಔಷಧ ನಿಯಂತ್ರಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದರು.ಅಬಕಾರಿ ಇಲಾಖೆ ಉಪ ಆಯುಕ್ತ ಬಿ.ಮಾದೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ವಿವಿಧ ಕಾಲೇಜುಗಳು ಪ್ರಾಂಶುಪಾಲರು, ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು