ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ತಾಯಿ ತನ್ನ ಎರಡು ವರ್ಷದ ಹೆಣ್ಣು ಮಗುವನ್ನು ನೇಣು ಹಾಕಿ ಕೊಲೆ ಮಾಡಿದ ನಂತರ ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ನಡೆದಿದೆ.ತಾಲೂಕಿನ ಮರಪಳ್ಳಿ ಗ್ರಾಮದ ಶಿವಲೀಲಾ ಗಂಡ ನಂದಕುಮಾರ (೨೩) ವರ್ಷಿತಾ ನಂದಕುಮಾರ (೨) ಮೃತಪಟ್ಟಿರುವ ದುದೈರ್ವಿಗಳು.
ಕೆರೋಳಿ ಗ್ರಾಮದ ತವರು ಮನೆಯಿಂದ ಮಂಗಳವಾರ ಸಂಜೆ ಗಂಡನ ಮನೆಗೆ ಬಂದಿದ್ದಾಳೆ. ಅತ್ತೆ ಮತ್ತು ಗಂಡನು ಮನೆಯಲ್ಲಿ ಯಾರೂ ಇಲ್ಲದಿರುವ ಸಮಯವನ್ನು ನೋಡಿ ತನ್ನ ಮನೆಯ ಬಾಗಿಲು ಮುಚ್ಚಿ ಎರಡು ವರ್ಷದ ಹೆಣ್ಣು ಮಗು ವರ್ಷಿತಾಳನ್ನು ಮೊದಲು ನೇಣು ಹಾಕಿ ಕೊಲೆ ಮಾಡಿದ ನಂತರ ತಾನು ನೇಣು ಬಿಗಿದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ಶಿವಲೀಲಾ ಇವರು ಮುಂಗೋಪಿ ಸ್ವಭಾವಳಾಗಿದ್ದಳು. ಸಣ್ಣ ವಿಷಯಕ್ಕೆ ಮುನಿಸಿಕೊಂಡು ಇರುತ್ತಿದ್ದಳು ಅಲ್ಲದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಆಕೆಯ ತಂದೆ ಶಿವಪ್ಪ ರೇವಪ್ಪ ಗೋಟಗಿ ಕೆರೋಳಿ ಇವರು ನೀಡಿದ ದೂರಿನ ಮೇರೆಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಚಿಂಚೋಳಿ ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು.
ತಾಯಿ ಮಗಳು ಮೃತಪಟ್ಟ ಸುದ್ದಿ ಗೊತ್ತಾಗುತ್ತಿದ್ದಂತೆಯೇ ತವರು ಮನೆಯವರು ಮರಪಳ್ಳಿ ಗ್ರಾಮಕ್ಕೆ ಬಂದು ಗಲಾಟೆ ನಡೆಸಿದ್ದಾರೆ. ಪೊಲೀಸರು ಮಧ್ಯೆ ಪ್ರವೇಶಿಸಿ ಗೊಂದಲಮಯ ವಾತಾವರಣವನ್ನು ಶಾಂತಗೊಳಿಸಿದ್ದಾರೆ.ತಾಯಿ ಮತ್ತು ಮಗಳು ಸಾವಿಗೆ ಶರಣಾದ ಘಟನೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ ಮನೆಯಲ್ಲಿ ಸಣ್ಣಪುಟ್ಟ ಮಾತಿಗೆ ಮುನಿಸಿಕೊಳ್ಳುತ್ತಿದ್ದಳು ಎಂದು ಮರಪಳ್ಳಿ ಗ್ರಾಮದ ಪರ್ವತಕುಮಾರ ದೇಸಾಯಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮತ್ತು ಸಿಪಿಐ ಎಲ.ಎಚ್.ಗೌಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಂಡ ಆನಂದಕುಮಾರ ಇವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗುತ್ತಿದ್ದೆ ಎಂದು ಪಿಎಸ್‌ಐ ಸಿದ್ದೇಶ್ವರ ತಿಳಿಸಿದ್ದಾರೆ.