ಶಿಕ್ಷಣ ಅಭಿವೃದ್ಧಿಯ ಸಂಕೇತವಾದರೆ, ಕ್ರೀಡೆ ದೇಶದ ಕೀರ್ತಿಯ ಪ್ರತೀಕ

| Published : Oct 07 2024, 01:44 AM IST

ಶಿಕ್ಷಣ ಅಭಿವೃದ್ಧಿಯ ಸಂಕೇತವಾದರೆ, ಕ್ರೀಡೆ ದೇಶದ ಕೀರ್ತಿಯ ಪ್ರತೀಕ
Share this Article
  • FB
  • TW
  • Linkdin
  • Email

ಸಾರಾಂಶ

ತುರುವೇಕೆರೆ: ಶಿಕ್ಷಣ ದೇಶದ ಅಭಿವೃದ್ಧಿಯ ಸಂಕೇತವಾದರೆ, ಕ್ರೀಡೆಯು ದೇಶದ ಕೀರ್ತಿಯ ಪ್ರತೀಕ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಹೇಳಿದರು.

ತುರುವೇಕೆರೆ: ಶಿಕ್ಷಣ ದೇಶದ ಅಭಿವೃದ್ಧಿಯ ಸಂಕೇತವಾದರೆ, ಕ್ರೀಡೆಯು ದೇಶದ ಕೀರ್ತಿಯ ಪ್ರತೀಕ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಹೇಳಿದರು.

ತಾಲೂಕಿನ ಕಸಬಾ ವ್ಯಾಪ್ತಿಯ ಗುಡ್ಡೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ಹಾಗು ಇಂದಿರಾಗಾಂಧಿ ವಸತಿ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೧೪ ರಿಂದ ೧೭ ವರ್ಷದೊಳಗಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಆರೂ ತಾಲೂಕಿನ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು ಕಠಿಣ ಪರಿಶ್ರಮ ಹಾಕಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಬಂದಿದ್ದಾರೆ. ಇಲ್ಲಿ ಗೆದ್ದು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹಾರೈಸಿದರು.

ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಪ್ರಯತ್ನಿಸುತ್ತಾರೆ. ಆದರೆ ಯಾರಲ್ಲಿ ಪ್ರತಿಭೆ ಹಾಗೂ ಆಟವಾಡುವ ಧೃಢ ಮನಸ್ಸು ಇರುವುದೋ ಅವರು ವಿಜೇತರಾಗುತ್ತಾರೆ. ಸೋತವರು ಮರುಗದೆ ಗೆಲ್ಲಲು ಮರಳಿ ಪ್ರಯತ್ನ ಮಾಡಬೇಕು ಮತ್ತು ಅಭ್ಯಾಸಗಳನ್ನು ತಪ್ಪದೇ ನಡೆಸಬೇಕು ಎಂದು ಸೋಮಶೇಖರ್ ಹೇಳಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜು ಮಾತನಾಡಿ, ಕ್ರೀಡೆಯು ಮಕ್ಕಳ ಕಲಿಕೆಗೆ ಸಧೃಢ ಮನಸ್ಸನ್ನು ರೂಪಿಸಿಕೊಡುತ್ತದೆ. ಶಿಕ್ಷಕರು ತಮ್ಮ ಮಕ್ಕಳಿಗೆ ಬರೀ ಗೆಲ್ಲುವುದನ್ನೇ ಮಾತ್ರ ಕಲಿಸದೆ ಸೋತಾಗಲೂ ಹೇಗೆ ಸಕಾರಾತ್ಮಕ ವರ್ತಿಸಬೇಕು ಎಂಬುದನ್ನು ಸಹ ಕಲಿಸಿಕೊಡಬೇಕು ಎಂದು ತಿಳಿಸಿದರು.

ತುರುವೇಕೆರೆ, ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್ ಮತ್ತು ತಿಪಟೂರು ತಾಲೂಕುಗಳಿಂದ ಒಟ್ಟು ೩೦೦ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಶಾಸಕ ಎಂ.ಟಿ.ಕೃಷ್ಣನವರು, ಜಿಲ್ಲಾ ಉಪನಿರ್ದೇಶಕ ಎಚ್.ಕೆ.ಮನಮೋಹನ್ ಜಿಲ್ಲಾ ಕ್ರೀಡಾಕೂಟಕ್ಕೆ ಭೇಟಿ ನೀಡಿ ಕ್ರೀಡಾಪಟುಗಳನ್ನು ಅಭಿನಂದಿಸಿದರು.

ಡಿಡಿಪಿ ಎಚ್.ಕೆ.ಮನಮೋಹನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು, ಆನೇಕೆರೆ ಗ್ರಾಪಂ ಅಧ್ಯಕ್ಷೆ ಮಂಜುಶ್ರೀ, ಜಿಲ್ಲಾ ವಸತಿ ಶಾಲೆಗಳ ಡಿ.ಸಿ.ಒ ಸತೀಶ್, ಶಿರಾ ವಸತಿ ಶಾಲೆ ಪ್ರಾಂಶುಪಾಲ ಕಸ್ತೂರಿ ಕುಮಾರ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಪ್ಪ ನಾವರಗಿ, ಇಂದಿರಾ ಗಾಂಧಿ ವಸತಿ ಶಾಲೆಯ ಸತೀಶ್ ಜಮಾದಾರ್, ದೈಹಿಕ ಪರಿವೀಕ್ಷಕ ಸಿದ್ದಪ್ಪ ವಾಲಿಕರ್ ಇನ್ನಿತರ ಗಣ್ಯರು ಇದ್ದರು.