ನಿತ್ಯ ಬೆಳಗ್ಗೆ 6 ಗಂಟೆಗೆ ವಚನಾಭಿಷೇಕ ಜರುಗಲಿದೆ. ಜು. 26ರಿಂದ ಪ್ರವಚನ ಪ್ರಾರಂಭವಾಗಲಿದ್ದು, ಬಸವ ಬೆಳವಿಯ ಶರಣಬಸವ ದೇವರು ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರ ಚರಿತಾಮೃತದ ಕುರಿತು ನಿತ್ಯ ಸಂಜೆ 7 ಗಂಟೆಯಿಂದ ಪ್ರವಚನ ಮಾಡಲಿದ್ದಾರೆ.
ಮುಂಡರಗಿ: ರಾಜ್ಯದ ಸುಮಾರು 18 ಜಿಲ್ಲೆಗಳಲ್ಲಿ ಮಳೆ ಕೊರತೆ ಇದ್ದು, ಜಗಕೆಲ್ಲ ಅನ್ನ ಹಾಕುವ ರೈತರು ಆನಂದವಾಗಿದ್ದರೆ ಮಾತ್ರ ನಾವೆಲ್ಲರೂ ಆನಂದವಾಗಿರಲು ಸಾಧ್ಯ ಎಂದು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ತೋಂಟದಾರ್ಯ ಮಠದಲ್ಲಿ ಬುಧವಾರದಿಂದ ಆಷಾಢ ಮಾಸದ ಅಂಗವಾಗಿ ಪ್ರಾರಂಭವಾದ ವಚನಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಎಷ್ಟೇ ಬರಗಾಲವಿದ್ದರೂ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ ಪರಂಪರೆಯನ್ನು ಮರೆಯುವ ಹಾಗಿಲ್ಲ. ಎಷ್ಟೇ ಕಷ್ಟವಿದ್ದರೂ ಮುನ್ನಡೆಸಿಕೊಂಡು ಬಂದಿದ್ದೇವೆ. ಮುಖ್ಯವಾಗಿ ನಮ್ಮ ಭಾರತ ದೇಶದೊಳಗಡೆ ಧಾರ್ಮಿಕತೆ, ಸಾಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಹೆಚ್ಚು ಬೆಲೆಯನ್ನು ಉಳಿಸಿಕೊಂಡು ಬಂದಿದ್ದೇವೆ. ಅದರಲ್ಲಿಯೇ ವಿಶೇಷವಾಗಿ ಕರ್ನಾಟಕದ ಮಠಮಾನ್ಯಗಳಲ್ಲಿ ಇದನ್ನು ಚಾಚು ತಪ್ಪದೇ ನಿರಂತರವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಅನೇಕ ಮಠಗಳು ಅನ್ನ, ಆಶ್ರಯ ಸೇರಿದಂತೆ ಎಲ್ಲವನ್ನೂ ಕೊಡುತ್ತಾ ಬಂದಿರುವುದನ್ನು ಇತಿಹಾಸದಲ್ಲಿ ಕಾಣಬಹುದು ಎಂದರು.
ಈಗಲೂ ಕಾಲ ಮಿಂಚಿಲ್ಲ. ಇನ್ನೂ ಮಳೆ ಬರಬಹುದೆಂದು ಆಶಾಭಾವನೆ ಇದ್ದು, ಉತ್ತಮವಾಗಿ ಮಳೆ ಆಗುವ ಮೂಲಕ ರೈತರಿಗೆ ಒಳ್ಳೆಯ ಫಸಲು ಬರುವಂತಾಗಲಿ. ರೈತರು ಖುಷಿಯಾಗಿದ್ದರೆ ಇಡೀ ದೇಶವೇ ಖುಷಿಯಾಗಿರುತ್ತದೆ ಎಂದರು.ಇಂದಿನಿಂದ ವಚನಾಭಿಷೇಕ ಪ್ರಾರಂಭವಾಗಿದ್ದು, ನಿತ್ಯ ಬೆಳಗ್ಗೆ 6 ಗಂಟೆಗೆ ವಚನಾಭಿಷೇಕ ಜರುಗಲಿದೆ. ಜು. 26ರಿಂದ ಪ್ರವಚನ ಪ್ರಾರಂಭವಾಗಲಿದ್ದು, ಬಸವ ಬೆಳವಿಯ ಶರಣಬಸವ ದೇವರು ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರ ಚರಿತಾಮೃತದ ಕುರಿತು ನಿತ್ಯ ಸಂಜೆ 7 ಗಂಟೆಯಿಂದ ಪ್ರವಚನ ಮಾಡಲಿದ್ದಾರೆ. 15 ದಿನಗಳ ಕಾಲ ಜರುಗಲಿರುವ ಪ್ರವಚನದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರವಚನ ಕಮಿಟಿಯವರು ಯೋಚಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ, ಉಪಾಧ್ಯಕ್ಷ ಬಸಯ್ಯ ಗಿಂಡಿಮಠ, ಕಾರ್ಯದರ್ಶಿ ಶರಣಪ್ಪ ಕುಬಸದ, ಸಹ ಕಾರ್ಯದರ್ಶಿ ಸುರೇಶ ಬಣಗಾರ, ಖಜಾಂಚಿ ಶಿವಕುಮಾರ ಬೆಟಗೇರಿ, ಸಮನ್ವಯ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಹಿರಿಯರಾದ ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ, ಎಸ್.ಪಿ. ಕೊಪ್ಪಳ, ಬಿ.ಎಸ್. ಬಿಸನಳ್ಳಿ, ಪವನ್ ಚೋಪ್ರಾ, ದೇವು ಹಡಪದ, ಶಿವು ವಾಲಿಕಾರ, ಸದಾಶಿವಯ್ಯ ಕಬ್ಬೂರಮಠ, ಸುರೇಶ ನಾಯಕ, ಮುಕ್ತಾಯಕ್ಕ ಬಳಗದ ಅಧ್ಯಕ್ಷ ಸುಕನ್ಯಾ ಕಬ್ಬೂರಮಠ, ಮಂಗಳಾ ಕರ್ಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.