ಗದಗ: ಎಚ್.ಕೆ. ಪಾಟೀಲ ಅವರು ಮನಸ್ಸು ಮಾಡಿದರೆ ನಾವೂ ಸಚಿವರಾಗುತ್ತೇವೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಎಚ್.ಕೆ. ಪಾಟೀಲ ಅವರು ಮುಖ್ಯಮಂತ್ರಿ ಆದರೆ ನಾನು ಖಂಡಿತವಾಗಿಯೂ ಮಂತ್ರಿಯಾಗುತ್ತೇನೆ ಎಂದ ಅವರು, ನಾನು ಸಚಿವನಾಗಬೇಕು ಎಂಬುದು ನನ್ನ ಅಭಿಮಾನಿಗಳ ಮತ್ತು ಕಾರ್ಯಕರ್ತರ ತೀವ್ರ ಆಸೆಯಾಗಿದೆ ಎಂದರು.

ಕಾರ್ಯಕರ್ತರ ಪ್ರೀತಿಗೆ ನಾನು ಚಿರಋಣಿ. ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೊಂದಿಗೂ ಅತ್ಯಂತ ಸೌಹಾರ್ದಯುತ ಬಾಂಧವ್ಯ ಹೊಂದಿದ್ದೇನೆ. ಸಮಯ ಬರಲಿ, ಎಲ್ಲವೂ ನಿರ್ಧಾರವಾಗಲಿದೆ. ನಾವು ಶಿಸ್ತಿನಿಂದ ಬಂದವರು. ಪಕ್ಷದ ನಿರ್ಧಾರವೇ ನಮಗೆ ಅಂತಿಮ ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸದ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಈಗಾಗಲೇ ಹೈಕಮಾಂಡ್ ಸ್ಪಷ್ಟಪಡಿಸಿದೆ. ವರಿಷ್ಠರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದರು.


ಹೊಂಡದಲ್ಲಿ ಮುಳುಗಿ ನರ್ಸಿಂಗ್ ವಿದ್ಯಾರ್ಥಿ ಸಾವು

ಗದಗ: ರಂಗಪಂಚಮಿಯ ಸಂಭ್ರಮದ ಆನಂತರ ಈಜಲು ಹೋದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಹೊಂಡದಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಲಕ್ಕುಂಡಿ ಗ್ರಾಮದಿಂದ ಕಣಗಿನಹಾಳ ರಸ್ತೆಯ ಜಮೀನೊಂದರಲ್ಲಿ ಶನಿವಾರ ನಡೆದಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಆದಿತ್ಯ (24) ಮೃತಪಟ್ಟ ದುರ್ದೈವಿ. ಈತ ಗದುಗಿನ ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದ. ಶನಿವಾರ ಗದಗ ನಗರದಲ್ಲಿ ಗೆಳೆಯರೊಂದಿಗೆ ರಂಗಪಂಚಮಿಯ ಬಣ್ಣದಾಟವಾಡಿದ್ದ ಆದಿತ್ಯ, ಆನಂತರ ಸ್ನಾನ ಮಾಡಲು ಲಕ್ಕುಂಡಿಯಿಂದ ಸುಮಾರು 3 ಕಿಮೀ ದೂರದಲ್ಲಿರುವ ಮುಲ್ಲಾನ ಹಳ್ಳದ ಸಮೀಪದ ಜಮೀನಿಗೆ ತೆರಳಿದ್ದ.ಅಲ್ಲಿ ಗಣಿಗಾರಿಕೆಯಿಂದ ಸೃಷ್ಟಿಯಾಗಿದ್ದ ಸುಮಾರು 20 ಅಡಿ ಆಳದ ಮಳೆನೀರು ತುಂಬಿದ ಹೊಂಡಕ್ಕೆ ಈಜಲು ಇಳಿದಿದ್ದಾನೆ. ನೀರಿನ ಆಳದ ಅರಿವಿಲ್ಲದೆ ಹೊಂಡದ ಸುಳಿಗೆ ಸಿಲುಕಿ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿದ್ದಾನೆ.

ಗೆಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ಸಂಜೆಯೇ ಶೋಧ ಕಾರ್ಯ ಆರಂಭಿಸಿದ್ದರು. ಆದರೆ, ಬೆಳಕಿನ ಅಭಾವದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಮತ್ತೆ ಕಾರ್ಯಾಚರಣೆ ಮುಂದುವರಿಸಿದ ಸಿಬ್ಬಂದಿ ಆದಿತ್ಯನ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.