ರಾಣಿಬೆನ್ನೂರು: ಸುಖ ಮತ್ತು ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಅದ್ಭುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು. ಇನ್ನೊಂದು ಕಡೆ ನಂಬಿಕೆಗಳು ಇರಬೇಕು. ಕಷ್ಟಗಳು ಜೀವನದಲ್ಲಿ ಪಾಠ ಕಲಿಸಿದರೆ ನಂಬಿಕೆಗಳು ಮನುಷ್ಯನಲ್ಲಿ ಶಕ್ತಿ ತುಂಬುತ್ತವೆ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು. ತಾಲೂಕಿನ ಲಿಂಗದಹಳ್ಳಿ ಕ್ಷೇತ್ರದ ಡಾ. ವೀರಭದ್ರ ಶ್ರೀಗಳವರ ಷಷ್ಠ್ಯಬ್ಧಿ ಅಂಗವಾಗಿ ಗುರುವಾರ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯ ಜೀವನದಲ್ಲಿ ಸ್ನೇಹಿತರನ್ನು ಕೂಡಬೇಕು. ಶತ್ರುಗಳನ್ನು ಕಳೆಯಬೇಕು. ಸಂತೋಷವನ್ನು ಗುಣಿಸಬೇಕು. ದುಃಖವನ್ನು ಭಾಗಿಸಬೇಕು. ಇವು ಬಾಳಿನ ಭಾಗ್ಯೋದಯಕ್ಕೆ ಬೇಕಾದ ಅಮೂಲ್ಯ ಚಿಂತನಗಳು. ವೀರಶೈವ ಧರ್ಮ ವೃಕ್ಷದ ಬೇರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಾದರೆ ಆ ಧರ್ಮ ವೃಕ್ಷದ ಹೂ ಹಣ್ಣು ಬಸವಾದಿ ಶರಣರು. ಶ್ರೀ ಜಗದ್ಗುರು ರೇಣುಕಾರ್ಯರ ಉಸಿರಿಲ್ಲದೇ, ಬಸವಣ್ಣನವರ ಬೆವರಿಲ್ಲದೇ ವೀರಶೈವ ಧರ್ಮ ಪೂರ್ಣವಾಗದು. ಇವೆರಡರ ಸಮನ್ವಯ ಸದ್ಭಾವನೆಯಿಂದ ಬಾಳುವುದೇ ಎಲ್ಲರ ಗುರಿಯಾಗಬೇಕು. ಲಿಂಗದಹಳ್ಳಿ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ ಕ್ರಿಯಾಶೀಲ ಬದುಕು ಮಠದ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿದೆ. ಅವರ ಬಹು ದಿನಗಳ ಕನಸು ಇಂದು ನನಸಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗಸ್ವಾಮಿಗಳು ಮಾತನಾಡಿ, ಗಾಳಿಗೆ ಗಾಳ ಹಾಕುವುದಕ್ಕೆ ಮುಳ್ಳಿನ ಗಿಡಕ್ಕೆ ಬಟ್ಟೆ ಒಣ ಹಾಕಲು ಸಾಧ್ಯವಿಲ್ಲ. ಹಾಗೆಯೇ ಕೆಲವರಿಗೆ ಎಷ್ಟೇ ಒಳ್ಳೆಯದನ್ನು ಮಾಡಿದರೂ ಅವರಿಂದ ಕೆಟ್ಟವರು ಅನಿಸಿಕೊಳ್ಳುವುದು ತಪ್ಪುವುದಿಲ್ಲ. ಪ್ರಯತ್ನ ಹಣೆ ಬರಹಕ್ಕಿಂತ ದೊಡ್ಡದು. ಪ್ರಯತ್ನ ಎಂಬ ಪದ ಚಿಕ್ಕದಾದರೂ ಅದರ ಫಲಿತಾಂಶ ಅಮೋಘ ಅಪಾರ. ವೀರಶೈವ ಧರ್ಮದ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಶ್ರೀ ಜಗದ್ಗುರು ಪಂಚಾಚಾರ್ಯರು ಸಕಲ ಜಾತಿ ಜನಾಂಗಗಳಿಗೆ ಅಮೂಲ್ಯವಾದ ಆಧ್ಯಾತ್ಮ ಸಂದೇಶ ನೀಡಿದ್ದಾರೆ ಎಂದರು. ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮಿಗಳು ಮಾತನಾಡಿ, ವಸ್ತುವಿನ ಬೆಲೆ ಕೊಳ್ಳುವುದಕ್ಕೆ ಮುಂಚೆ ತಿಳಿದುಕೊಳ್ಳುತ್ತೇವೆ. ಮನುಷ್ಯನ ಬೆಲೆ ಕಳೆದುಕೊಂಡ ನಂತರ ತಿಳಿದುಕೊಳ್ಳುತ್ತೇವೆ. ಈಗಿನ ಕಾಲದಲ್ಲಿ ಸತ್ಯದ ಮಾತುಗಳು ಮುಳ್ಳುಗಳಾಗುತ್ತವೆ. ಬಣ್ಣದ ಮಾತುಗಳು ಮುತ್ತುಗಳಾಗುತ್ತವೆ. ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು, ವೃದ್ಧಾಪ್ಯದಲ್ಲಿ ಆತ್ಮ ಚಿಂತನೆ ನಡೆಸುತ್ತಾ ಪುಣ್ಯ ಸಂಪಾದಿಸಿಕೊಳ್ಳಬೇಕು. ಧರ್ಮದಿಂದ ಮನುಷ್ಯ ವಿಮುಖನಾದರೆ ಸರ್ವ ನಾಶ ಖಂಡಿತ. ವೀರಶೈವ ಧರ್ಮ ಸಂವಿಧಾನದಲ್ಲಿ ಜಾತಿ ಮತ ಪಂಥ ಮೀರಿ ಉಜ್ವಲ ಬದುಕಿಗೆ ಕೊಟ್ಟ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ. ಜಗ ಬೆಳಗಲು ಸೂರ್ಯ. ಬಾಳು ಬೆಳಗಲು ಗುರು ಬಹಳ ಮುಖ್ಯ ಎಂದರು. ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಸ್ವಾಮಿಗಳು ಮಾತನಾಡಿ, ಮನುಷ್ಯ ಬಾಳಿ ಬದುಕಲು ನೀರು, ಅನ್ನ ಗಾಳಿ ಬೇಕು. ಆದರ್ಶ ವ್ಯಕ್ತಿಯಾಗಿ ಬಾಳಲು ಪೂರ್ವಾಚಾರ್ಯರ ನುಡಿಗಳು ಬೇಕು. ದೇವರು ಮತ್ತು ಧರ್ಮವನ್ನು ಮರೆಯಬಾರದು. ನಾವು ಮಾಡಿದ ಉಪಕಾರ ಮತ್ತು ಪರರು ಮಾಡಿದ ಅಪಕಾರ ಮರೆತು ನಡೆದರೆ ಬಾಂಧವ್ಯಗಳು ಬೆಳೆಯುತ್ತವೆ ಎಂದರು. ಕಾಶಿ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಮಾತನಾಡಿದರು. ನೇತೃತ್ವ ವಹಿಸಿದ ಲಿಂಗದಹಳ್ಳಿ ಹಿರೇಮಠದ ಡಾ.ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನದಿಯ ನೀರು ಎಷ್ಟು ತುಂಬಿದರೂ ಅದು ಖಾಲಿಯಾಗುವುದಿಲ್ಲ. ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಪೂರ್ಣವಾಗುವುದಿಲ್ಲ. ಬಿಸಿಲು ಹೊತ್ತು ಮರ ನೆರಳು ನೀಡುತ್ತದೆ. ದೀಪ ತಾನು ಉರಿದು ಬೆಳಕು ಕೊಡುತ್ತದೆ. ಅದರಂತೆ ಮಹಾತ್ಮರು ತಾವು ನೋವು ಉಂಡು ನಮಗೆ ನಲಿವನ್ನು ಕೊಟ್ಟಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಜೀವ ಸಂಕುಲದ ಶ್ರೇಯಸ್ಸಿಗೆ ದಾರಿದೀಪವಾಗಿವೆ. ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಶುಭಾಗಮನ ಸಕಲರಿಗೂ ಶಾಂತಿ ನೆಮ್ಮದಿ ನೀಡಿ ಶ್ರೇಯಸ್ಸಿಗೆ ಕಾರಣವಾಗಲಿ ಎಂದರು. ನಾಡಿನ ಹರ, ಚರ ಮೂರ್ತಿಗಳು ಸಮ್ಮುಖ ವಹಿಸಿದ್ದರು. ಜುಂಜಪ್ಪ ಹೆಗ್ಗಪ್ಪನವರ, ಎಸ್.ಎಸ್.ರಾಮಲಿಂಗಣ್ಣನವರ, ಪ್ರಶಾಂತ ರಿಪ್ಪನ್‌ಪೇಟೆ ಮತ್ತಿತರರಿದ್ದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಬಂದ ಎಲ್ಲ ಭಕ್ತರಿಗೂ ಅನ್ನ ದಾಸೋಹ ಜರುಗಿತು.

ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ವೀರಭದ್ರ ಶಿವಾಚಾರ್ಯರ ಜನ್ಮ ಷಷ್ಠಬ್ದಿ ಪ್ರಯುಕ್ತ ಏರ್ಪಡಿಸಿದ್ದ ಧರ್ಮಸಭೆಯನ್ನು ರಂಭಾಪುರಿಶ್ರೀಗಳು ಉದ್ಘಾಟಿಸಿದರು. ಉಜ್ಜಯಿನಿ, ಶ್ರೀಶೈಲ, ಕಾಶಿ ಜಗದ್ಗರುಗಳು ಸಾನ್ನಿಧ್ಯ ವಹಿಸಿದ್ದರು.