ಶಾಲೆ ನಡೆಸಲು ಅಸಾಧ್ಯವಾದರೆ ಆಡಳಿತ ಮಂಡಳಿ ರಾಜೀನಾಮೆ ನೀಡಲು ಆಗ್ರಹ

| Published : Mar 18 2024, 01:46 AM IST

ಸಾರಾಂಶ

ನೇತಾಜಿ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಯಾರ ಗಮನಕ್ಕೂ ತಾರದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಶಾಲೆಯನ್ನು ಮುಚ್ಚಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿದ್ದರೂ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಶಾಲೆಯನ್ನು ಮುನ್ನಡೆಸಲು ಸಾಧ್ಯವಾಗದಿದ್ದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ತಕ್ಷಣ ರಾಜೀನಾಮೆ ಕೊಡಲಿ ಎಂದು ಸ್ಥಳೀಯ ನೆರವಂಡ ಉಮೇಶ್ ಒತ್ತಾಯಿಸಿದರು.

ಗ್ರಾಮದ ನೇತಾಜಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಳೆ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

ಬಲಮಾವಟಿ ಗ್ರಾಮದಲ್ಲಿರುವ ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಜಾಗವನ್ನು ಮತ್ತೊಂದು ಖಾಸಗಿ ಸಂಸ್ಥೆಗೆ ಪರಭಾರೆ ಮಾಡಲು ಗುಟ್ಟಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ನೇತಾಜಿ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಯಾರ ಗಮನಕ್ಕೂ ತಾರದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಶಾಲೆಯನ್ನು ಮುಚ್ಚಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಶಾಲೆಯ ಹಳೆ ಕಟ್ಟಡ ದುಃಸ್ಥಿತಿಯಲ್ಲಿದೆ. ಈ ಕಟ್ಟಡದಲ್ಲಿ 25 ಕಾರ್ಮಿಕರಿಗೆ ತಂಗಲು ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿದೆ. ಇಂತಹ ಘಟನೆಗಳ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶಾಲೆಯಲ್ಲಿ 10 ಎಕರೆ ಸ್ಥಳವಿದ್ದು, ಕಾಫಿ, ಕಾಳು ಮೆಣಸು ಬೆಳೆಯಲಾಗುತ್ತಿದೆ. ಆದರೂ ಶಾಲೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವ ಆಡಳಿತ ಮಂಡಳಿ ಶಾಲೆ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ತೆರಳಲಿ ಎಂದು ಸರ್ವರು ಒತ್ತಾಯಿಸಿದರು.

ಮಾದೆಯಂಡ ರಾಜ ಚಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ನಿವೃತ್ತ ಶಿಕ್ಷಕ ಪಾಲೆಯಡ ಕಾಳಪ್ಪ, ಚಂಗೇಟಿರ ಜೋಯಪ್ಪ, ಮೂವೆರ ಸುಬ್ರಮಣಿ, ಚಂಗೇಟಿರ ಲಕ್ಷ್ಮಣ, ಚಂಗೇಟಿರ ಅಚ್ಚಯ್ಯ ,ಚಂಗೇಟಿರ ಕುಮಾರ ಸೋಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಮಚುರ ರವೀಂದ್ರ, ಮಣವಟ್ಟಿರ ದಯಾ ಚಿನ್ನಪ್ಪ, ಮೊವೇರ ರೇಖಾ ಪ್ರಕಾಶ್, ಬೊಟ್ಟೋಲ೦ಡ ಜಾನಕಿ ಮಂದಣ್ಣ, ತೋಲಂಡ ದೇವಯ್ಯ, ಅಪ್ಪು ಮಣಿಯ೦ಡ ಮಾಚಯ್ಯ, ಕೈಬುಲಿರ ಗಣಪತಿ, ಪಾಲೆಯಡ ನಿರ್ಮಲಾ ಅಯ್ಯಪ್ಪ, ತಾಪಂಡ ಅಪ್ಪಣ್ಣ, ಚಿರೋಟಿರ ಮುತ್ತಣ್ಣ ಚಂಗೆಟಿರ ಅಪ್ಪಣ್ಣ, ಪಳಂಗೋಟು ಹನೀಫ್, ಚಂಬಾರಂಡ ಜುಬೇರ್, ತೋಲಂಡ ನಂದ ಮತ್ತಿತರರು ಉಪಸ್ಥಿತರಿದ್ದರು.