ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ದೇಶಾದ್ಯಂತ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದ್ದು, ದ.ಕ. ಜಿಲ್ಲೆಯಲ್ಲಿ ಏ. ೨೬ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವಾಗಿ ಆಚರಿಸುವುದರೊಂದಿಗೆ ಸಂಭ್ರಮದಿಂದ, ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ಚಲಾಯಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿಯಾದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದರು.ಅವರು ಭಾನುವಾರ ಸಂಜೆ ತಮ್ಮ ಕಚೇರಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣೆಯ ಬಗ್ಗೆ ಮಾಹಿತಿ ನೀಡಿರು. ಮಾ.೧೬ರಿಂದ ಆರಂಭಗೊಂಡು ಜೂ.೬ ರ ತನಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ದ.ಕ. ಲೋಕಸಭಾ ಕ್ಷೇತ್ರದ ೭೦೬ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ೧,೦೪,೯೬೫ ಪುರುಷರು ಹಾಗೂ ೧,೦೮,೫೧೬ ಮಹಿಳೆಯರು ಸೇರಿ ಒಟ್ಟು ೨,೧೩,೪೮೧ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ನಮೂನೆ ೬ ರಲ್ಲಿ ಅರ್ಜಿ ಸಲ್ಲಿಸಲು ಮಾ.೨೪ ರ ತನಕ ಅವಕಾಶವಿದೆ. ಒಟ್ಟು ೯೩ ಸರ್ವಿಸ್ ಮತಗಳಿದ್ದು, ೪,೫೮೧ ಯುವ ಮತದಾರರು, ೪೧೮೬ ಮಂದಿ ೮೫ ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿದ್ದಾರೆ.
221 ಮತಗಟ್ಟೆಗಳು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಒಂದು ಮತಗಟ್ಟೆ ಹೊಸದಾಗಿ ಸೇರ್ಪಡೆಯಾಗಿ ಒಟ್ಟು ೨೨೧ ಮತಗಟ್ಟಿಗಳಿವೆ. ೧೨೭ ಹಾಗೂ ೧೨೮ ಮತಗಟ್ಟೆಯ ಬದಲಾವಣೆಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಏ.೪ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಚುನಾವಣೆಯಲ್ಲಿ ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ೮ ಫ್ಲೈಯಿಂಗ್ ಸ್ಕ್ವಾಡ್ ಮಾಡಲಾಗಿದ್ದು, ವೀಡಿಯೋ ಸರ್ವೆಲೆನ್ಸ್ ಹಾಗೂ ವೀಡಿಯೋ ರಿವೀಲ್ ತಂಡಗಳು ಕಾರ್ಯನಿರ್ವಹಿಸಲಿವೆ. ಕ್ಷೇತ್ರದ ಗಡಿಭಾಗಳಾದ ಪಾಣಾಜೆ, ಈಶ್ವರಮಂಗಲ, ಸಾರಡ್ಕಗಳಲ್ಲಿ ಚೆಕ್ ಪೋಸ್ಟ್ ಮೂಲಕ ನಿಗಾ ವಹಿಸಲಾಗುತ್ತದೆ. ಕಾರ್ಯಕ್ರಮಗಳನ್ನು ನಡೆಸುವವರಿಗೆ ಸಂಬಂಧಿಸಿ ಸುವಿಧಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ ಸಿಂಗಲ್ ವಿಂಡೋ ವ್ಯವಸ್ಥೆಯನ್ನೂ ತಾಲೂಕು ಆಡಳಿತ ಸೌಧದಲ್ಲಿ ಮಾಡಲಾಗುತ್ತಿದ್ದು, ಅಲ್ಲಿಯೂ ಅರ್ಜಿ ಸಲ್ಲಿಸಬಹುದು.ಸಿ ವಿಜಿಲೆನ್ಸ್ ಮೂಲಕ ದೂರುಗಳನ್ನು ಸಲ್ಲಿಸಲು ಅವಕಾಶವಿದೆ. ಜಿಲ್ಲಾಧಿಕಾರಿಗಳ ಟೋಲ್ ಫ್ರೀ ನಂಬರ್ ೧೯೫೦ ಅಥವಾ ೦೮೨೫೧-೨೩೦೩೫೭ ಪುತ್ತೂರು ಕಂಟ್ರೋಲ್ ರೂಂಗೂ ದೂರು ಸಲ್ಲಿಸಬಹುದು. ಇದು ದಿನದ ೨೪ ಗಂಟೆಯೂ ಲಭ್ಯವಿರುತ್ತವೆ.
ಚುನಾವಣಾ ನೀತಿ ಸಂಹಿತೆ ಬಂದಿರುವುದರಿಂದ ರಾಜಕೀಯ ಸಂಬಂಧಿ ಬ್ಯಾನರ್‌ಗಳನ್ನು ತಕ್ಷಣದಿಂದ ತೆರವು ಮಾಡಲಾಗುತ್ತಿದೆ. ಫೊಟೋ, ಪೈಂಟಿಂಗ್, ಬ್ಯಾನರ್‌ಗಳ ಮೂಲಕ ರಾಜಕೀಯ ಪ್ರಚಾರಗಳಿಗೆ ಅವಕಾಶವಿಲ್ಲ. ಈ ಕುರಿತು ಸ್ಥಳೀಯಾಡಳಿತಗಳಿಗೆ ಸೂಚನೆ ನೀಡಲಾಗಿದ್ದು, ಬ್ಯಾನರ್‌ಗಳನ್ನು ಅಳವಡಿಸುವ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು. ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಿಕ್ಕೆಯನ್ನು ಪರಿಶೀಲಿಸಬೇಕು. ಯುವ ಮತದಾರರ ಸೇರ್ಪಡೆಗೆ ಹೆಚ್ಚಿನ ಪ್ರಯತ್ನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಹಸೀಲ್ದಾರ್ ಪುರಂದರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ್ ಇದ್ದರು.