ಜಲಜೀವನ್ ಮಿಶನ್ ಯೋಜನೆಯಡಿ ಬೋಗಸ್ ಬಿಲ್ ತೆಗೆದು ಹಣ ದುರುಪಯೋಗ ಮಾಡಿಕೊಂಡಿದ್ದರ ಬಗ್ಗೆ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹಾವೇರಿ: ಜಲಜೀವನ್ ಮಿಶನ್ ಯೋಜನೆಯಡಿ ಬೋಗಸ್ ಬಿಲ್ ತೆಗೆದು ಹಣ ದುರುಪಯೋಗ ಮಾಡಿಕೊಂಡಿದ್ದರ ಬಗ್ಗೆ ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜಲಜೀವನ್ ಮಿಶನ್ ಯೋಜನೆಯಡಿ ಅವ್ಯವಹಾರ ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಜಲಜೀವನ್ ಮಿಶನ್ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುವಂತಹದ್ದು. ಯೋಜನೆ ಬಗ್ಗೆ ಗೊಂದಲವೂ ಇದೆ. ಈ ಬಗ್ಗೆ ಈಗಾಗಲೇ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದೇನೆ. ಕೇಂದ್ರದಿಂದ ರಾಜ್ಯಕ್ಕೆ 15 ಸಾವಿರ ಕೋಟಿ ರು. ಬಾಕಿ ಬರಬೇಕಿದೆ. ಪ್ರಮುಖವಾಗಿ ಗ್ರಾಪಂನವರಿಗೆ ಎನ್‌ಓಸಿ ಕೊಡುವ ಅಧಿಕಾರವಿದೆ. ಅವರು ಎನ್‌ಓಸಿ ಕೊಟ್ಟರೆ ನಮಗೇನು ಮಾಡಲಿಕ್ಕೆ ಬರೋದಿಲ್ಲ. ಹಣ ದುರುಪಯೋಗ ಆಗಿದ್ದರ ಬಗ್ಗೆ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದರು.ರಾಜ್ಯದ ಎರಡು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿದ್ದು, ಆಡಳಿತ ವಿರೋಧ ಅಲೆ ಇದೆ. ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಇದ್ದಿದ್ದರೆ, ಕಳೆದ ಬಾರಿಯ ಉಪ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಬಹುದಿತ್ತಲ್ಲಾ? ಎಂದು ಪ್ರಶ್ನಿಸಿದರು. ಈ ಉಪ ಚುನಾವಣೆಗಳಲ್ಲಿ ಗೆಲುವು ಕೂಡ ಆಡಳಿತ ರೂಢ ಪಕ್ಷದ್ದೇ ಆಗಿರುತ್ತದೆ. ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಸಬಲೀಕರಣಗೊಳಿಸಿವೆ. ಗ್ಯಾರಂಟಿ ಇರದೆ ಹೋಗಿದ್ದರೆ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿರಲಿಲ್ಲ. ಹಾಗಾಗಿ ಗ್ಯಾರಂಟಿಗಳೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತವೆ, ನಮ್ಮ ಗ್ಯಾರಂಟಿಗಳನ್ನು ಮೋದಿಯವರು ಹೋದಲ್ಲೆಲ್ಲಾ ಪಾಲನೆ ಮಾಡುತ್ತಿದ್ದಾರೆ ಎಂದರು.ಕಾಡುಪ್ರಾಣಿಗಳಿಗೆ ಸಂತಾನಹರಣ: ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕಾಡು ಪ್ರಾಣಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕುರಿತ ಸರ್ಕಾರದ ಪ್ರಸ್ತಾವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹುಲಿಗಳು ಹೆಚ್ಚಾಗಿವೆ, ಆನೆಗಳು ಹೆಚ್ಚಾಗಿವೆ. ಎಷ್ಟು ಪ್ರಾಣಿಸಂಖ್ಯೆಗೆ ಅನುಗುಣವಾಗಿ ಕಾಡು ಇರಬೇಕಿತ್ತೋ, ಅಷ್ಟು ಪ್ರದೇಶ ಈಗ ಕಾಡು ಇಲ್ಲ. ಹಾಗಾಗಿ ಅಂತಹ ಕಾಡು ಪ್ರಾಣಿಗಳಿಂದ ಜನರ ರಕ್ಷಣೆ ಹಾಗೂ ಪ್ರಾಣಿಗಳ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಬಡವರು ಮನೆ ಕಟ್ಟಿಕೊಳ್ಳಲು ಸಮರ್ಪಕವಾಗಿ ಮರಳು ಸಿಗುತ್ತಿಲ್ಲ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ತುಂಗಭದ್ರಾ, ಭೀಮೆ, ಆಲಮಟ್ಟಿ ಭಾಗದಲ್ಲೂ ಹೇರಳವಾಗಿ ಮರಳು ಇದೆ. ಮ್ಯಾನ್ಯುವಲ್ ಆಗಿ ಹಾರ್ವೆಸ್ಟಿಂಗ್ ಮಾಡುವುದಕ್ಕೆ ಬರುವುದಿಲ್ಲ. ಹಾಗಾಗಿಯೇ ಮಾಜಿ ಶಾಸಕರೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನಾವೂ ಕೂಡ ವೈಜ್ಞಾನಿಕವಾಗಿ ಯಾವ ರೀತಿಯಲ್ಲಿ ಮರಳನ್ನು ಪಡೆಯಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.