ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡಿದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮೈಸೂರು ವಿವಿ ಶಿಕ್ಷಣ ಮಂಡಳಿ ಮಾಜಿ ಸದಸ್ಯ ಡಾ. ವೈ.ಎಸ್. ಸಿದ್ದರಾಜು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯ ವಿವಿ ಪ್ರಾರಂಭವಾಗಿ ೫ ವರ್ಷ ಕಳೆದಿದೆ. ೨೫ ಸಾವಿರ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ವ್ಯಾಸಂಗ ಮಾಡಿರುತ್ತಾರೆ. ಸದ್ಯ ೪೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜಿಲ್ಲೆಯ ೪೮ ಕಾಲೇಜುಗಳು ಇದರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿವೆ, ಹೀಗಿದ್ದರೂ ಮಂಡ್ಯ ವಿವಿಯ ವಿಲೀನ ಮಾಡುವುದಾದರೂ ಏಕೆ ಎಂದು ಪ್ರಶ್ನಿಸಿದರು.
ಜಿಲ್ಲೆಗೊಂದು ವಿಶ್ವವಿದ್ಯಾಲಯದಂತೆ ಮಂಡ್ಯ ವಿವಿಯನ್ನು ಹಿಂದಿನ ಸರ್ಕಾರ ಅಸ್ತಿತ್ವಕ್ಕೆ ತಂದಿತು. ಆದರೆ ನಂತರ ಬಂದ ಸರ್ಕಾರ ವಿವಿಗೆ ಶಕ್ತಿ ನೀಡಿ ಸದೃಢವಾಗಿ ಬೆಳೆಸಬೇಕು. ವಿವಿ ಅಭಿವೃದ್ಧಿಗಾಗಿ ರೂಸಾ ಫಂಡ್ ಅಡಿಯಲ್ಲಿ ಈಗಾಗಲೇ ೫೦ ಕೋಟಿ ರು. ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮೈಸೂರು ವಿವಿ ಬಿಟ್ಟರೆ ಮಂಡ್ಯ ವಿವಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.ಮಂಡ್ಯ ಜಿಲ್ಲೆಯ ಗಡಿ ಭಾಗದಿಂದ ಸುಮಾರು ೮೫ ರಿಂದ ೯೬ ಕಿಮೀನಿಂದ ವಿದ್ಯಾರ್ಥಿಗಳು ಮಂಡ್ಯ ವಿವಿಗೆ ಪ್ರತಿನಿತ್ಯ ವ್ಯಾಸಂಗ ಮಾಡಲು ಬರುತ್ತಿದ್ದಾರೆ. ಬಹುಪಾಲು ವಿದ್ಯಾರ್ಥಿಗಳು ಹಳ್ಳಿಗಳಿಂದಲೇ ಬರುತ್ತಿರುವುದು ಕಷ್ಟಕರವಾಗಿದ್ದು, ಒಂದು ವೇಳೆ ವಿವಿ ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಿದರೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್‌ನಲ್ಲಿ ಎಲ್ಲ ೯ ವಿವಿಗಳಿಗೆ ಅನುದಾನ ಬಿಡುಗಡೆ ಮಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಭಿವೃದ್ಧಿ ಕಡೆ ಚಿಂತನೆ ಮಾಡಿ ವಿವಿಗಳನ್ನು ತಮ್ಮ ಅವಧಿಯಲ್ಲಿ ಉಳಿಸಿಕೊಂಡು ರಾಜ್ಯದ ಜನರಲ್ಲಿ ಒಳ್ಳೆಯ ಭಾವನೆ ಮೂಡಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.ಮಂಡ್ಯ ವಿವಿ ಶಿಕ್ಷಣ ಮಂಡಳಿ ಸದಸ್ಯ ಶಿವಶಂಕರ್ ಕೆ., ಸುಂದರಪ್ಪ, ಜೋಗೀಗೌಡ ಇತರರಿದ್ದರು.